ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ನೈಋುತ್ಯ ಮುಂಗಾರು ಮಳೆಯ ಆರ್ಭಟ ತಣ್ಣಗಾಗುತ್ತಿಲ್ಲ. ಹೀಗಾಗಿ ಹಲವೆಡೆ ಈ ಬಾರಿ ವಾಡಿಕೆಗಿಂತಲೂ ಹೆಚ್ಚು ಮಳೆ ಬೀಳುತ್ತಿದೆ. ಇಂತಹ ಪ್ರದೇಶಗಳಲ್ಲಿ ಅತಿವೃಷ್ಟಿ ಉಂಟಾದರೆ, ಇನ್ನೂ ಕೆಲವೆಡೆ ರೈತರು ಮಳೆಗಾಗಿ ಮುಗಿಲು ನೋಡುವಂತಾಗಿದೆ.
ಈ ಎರಡೂ ಕಾರಣಗಳಿಂದಾಗಿ ಈ ಬಾರಿಯೂ ರಾಜ್ಯದಲ್ಲಿ ಬಿತ್ತನೆಯ ಪ್ರಮಾಣ ಕಡಿಮೆಯಾಗಿದೆ. ರಾಜ್ಯದಲ್ಲಿ 82.48 ಲಕ್ಷ ಹೆಕ್ಟೇರ್ ಮುಂಗಾರು ಬಿತ್ತನೆಯ ಗುರಿ ಇದೆ. ಈ ಪೈಕಿ ಇಲ್ಲಿಯವರೆಗೆ 62.36 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆಯಾಗಿದೆ. ಅಂದರೆ ಶೇ. 76ರಷ್ಟು ಮಾತ್ರ ರಾಜ್ಯದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಇನ್ನುಳಿದ ಮುಕ್ಕಾಲು ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿಲ್ಲ. ಬಿತ್ತನೆಯಾದ ಬಹುತೇಕ ಪ್ರದೇಶಗಳಲ್ಲಿ ಈಗ ಅತಿವೃಷ್ಟಿಯ ಆತಂಕ ಕಾಡುತ್ತಿದ್ದರೆ, ಮಳೆಯಾಗದ ಪ್ರದೇಶದಲ್ಲಿ ಅನಾವೃಷ್ಟಿಯ ಚಿಂತೆ ಇದೆ.
ಚಿತ್ರದುರ್ಗದ ಕೆಲವು ತಾಲೂಕುಗಳು ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗಿಲ್ಲ. ಹೀಗಾಗಿ ಬಿತ್ತನೆ ಕಾರ್ಯ ಮಾಡಿಲ್ಲ. ಇನ್ನೂ ಹೆಚ್ಚು ಮಳೆಯಾಗುತ್ತಿರುವ ಪ್ರದೇಶದಲ್ಲಿ ಬಿತ್ತಿರುವ ಬೆಳೆ ಕೊಳೆಯುವಂತಾಗಿದೆ. ಕೋಲಾರ ಸುತ್ತಮುತ್ತ ರೈತರು ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ.

ಈ ಬಾರಿಯ ಮುಂಗಾರು ತುಂಬಾ ಆಶಾದಾಯಕವಾಗಿತ್ತು. ಹೀಗಾಗಿ ಬಿತ್ತನೆ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಇರಬಹುದು ಎಂದು ಭಾವಿಸಲಾಗಿತ್ತು. ಹಿಂದಿನ ವರ್ಷ ಮುಂಗಾರು ಕೈಕೊಟ್ಟ ಪರಿಣಾಮ ಬಿತ್ತನೆಗೆ ಭಾರೀ ಹಿನ್ನಡೆಯಾಗಿತ್ತು. ಆದರೆ, ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ರೈತ ವಲಯದಲ್ಲಿ ಖುಷಿ ತಂದಿತ್ತು. ಆದರೆ, ಈಗ ಅತಿವೃಷ್ಟಿ, ಅನಾವೃಷ್ಟಿ ಎರಡನ್ನೂ ಮಳೆರಾಯ ತಂದಿದ್ದು, ಮತ್ತೆ ರೈತ ಸಂಕುಲ ಸಂಕಷ್ಟ ಪಡುವಂತಾಗಿದೆ.ಈ ಬಾರಿ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ ಸೇರಿದಂತೆ, ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಹೆಚ್ಚು ಬಿತ್ತನೆಯಾಗಿದೆ. ಈ ಪ್ರದೇಶಗಳಲ್ಲಿ ಶೇ. 90 ರಿಂದ 100ರಷ್ಟು ಬಿತ್ತನೆ ಕಾರ್ಯವಾಗಿದೆ. ಇನ್ನೂ ಕೊಡಗು (ಶೇ.7), ರಾಮನಗರ (ಶೇ.12), ಕೋಲಾರ (ಶೇ.13), ಬಳ್ಳಾರಿ (ಶೇ.25) ಜಿಲ್ಲೆಗಳಲ್ಲಿ ಕಡಿಮೆ ಬಿತ್ತನೆಯಾಗಿದ್ದು, ರೈತರು ಸಂಕಷ್ಟ ಪಡುವಂತಾಗಿದೆ.
