13 ವರ್ಷದ ಅಪ್ರಾಪ್ತ ಬಾಲಕನೋರ್ವ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡಿ ತನ್ನ 9 ವರ್ಷದ ಸಹೋದರಿ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೇ, ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಕ್ರೌರ್ಯವನ್ನು ಮುಚ್ಚಿ ಹಾಕಲು ಬಾಲಕನಿಗೆ ಆತನ ತಾಯಿ ಹಾಗೂ ಇಬ್ಬರು ಅಕ್ಕಂದಿರೇ ಸಹಾಯ ಮಾಡಿರುವುದು ಕೂಡ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಏಪ್ರಿಲ್ 24ರಂದು ನಡೆದಿತ್ತು. ಪೊಲೀಸರು ಪ್ರಕರಣ ದಾಖಲಸಿಕೊಂಡು ತನಿಖೆ ಆರಂಭಿಸಿದ್ದರು. ಘಟನೆ ನಡೆದ ಸಂದರ್ಭದಲ್ಲಿ ಆಕೆ ನಿದ್ರಿಸುತ್ತಿದ್ದಳು ಎಂದು ಪೊಲೀಸ್ ಅಧಿಕಾರಿ ವರಿಷ್ಠಾಧಿಕಾರಿ ವಿವೇಕ್ ಸಿಂಗ್ ಹೇಳಿದ್ದಾರೆ. ವಿಚಾರಣೆಯ ನಂತರ 13 ವರ್ಷದ ಬಾಲಕ, ಆತನ ತಾಯಿ ಹಾಗೂ 17 ಮತ್ತು 18 ವರ್ಷದ ಇಬ್ಬರು ಸಹೋದರಿಯರನ್ನು ಬಂಧಿಸಲಾಗಿದೆ. ಪ್ರಕರಣ ಮುಚ್ಚಿ ಹಾಕಲು ತಾವು ಸಹಾಯ ಮಾಡಿದ್ದಾಗಿ ಈ ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅಪ್ರಾಪ್ತ ಬಾಲಕನು ಸಹೋದರಿಯ ಪಕ್ಕದಲ್ಲಿ ರಾತ್ರಿ ಮಲಗಿದ್ದ. ತನ್ನ ಮೊಬೈಲ್ ಫೋನ್ ನಲ್ಲಿ ಅಶ್ಲೀಲ ವಿಡಿಯೋ ನೋಡಿದ ನಂತರ ಅತ್ಯಾಚಾರ ನಡೆಸಿದ್ದಾನೆ. ಈ ಕುರಿತು ಅಪ್ಪನ ಬಳಿ ದೂರು ಹೇಳುವುದಾಗಿ ಆಕೆ ಬೆದರಿಸಿದಾಗ, ಆಕೆಯ ಕತ್ತು ಹಿಸುಕಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆನಂತರ ತಾಯಿಯ ಬಳಿ ಹೋಗಿ ಎಲ್ಲ ವಿಷಯ ಹೇಳಿದ್ದಾನೆ. ಈ ವೇಳೆ ಇಬ್ಬರೂ ಅಕ್ಕಂದಿರು ಎಚ್ಚರಗೊಂಡಿದ್ದರು. ಆರೋಪಿ ಬಾಲಕ ಮತ್ತು ಆತನ ಕುಟುಂಬಸ್ಥರನ್ನು ಬಂಧಿಸಲಾಗಿದ್ದು, ಈ ಕುರಿತು ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ತನಿಖೆಯ ದಿಕ್ಕು ತಪ್ಪಿಸಲು ಅವರು, ಬಾಲಕಿಗೆ ಯಾವುದೋ ವಿಷಕಾರಿ ಕೀಟ ಕಚ್ಚಿದೆ ಎಂದು ಸುದ್ದಿ ಹಬ್ಬಿಸಿದ್ದರು. ಚಿಕಿತ್ಸೆ ನೀಡಲು ಖಾಸಗಿ ವೈದ್ಯರು ನಿರಾಕರಿಸಿದ್ದರಿಂದ, ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ತಪಾಸಣೆ ನಡೆಸಿದ್ದ ವೈದ್ಯರು ಅತ್ಯಾಚಾರ ಹಾಗೂ ಕೊಲೆ ಆಕೆಯ ಸಾವಿಗೆ ಕಾರಣ ಎಂದು ಘೋಷಿಸಿದ್ದರು. ಆನಂತರ ತನಿಖೆ ಕೈಗೊಂಡಾಗ ಪೊಲೀಸರು ಸತ್ಯ ಹೊರ ಹಾಕಿದ್ದಾರೆ.