ಕುಂದಾಪುರ ಉಪ ವಿಭಾಗಧಿಕಾರಿ ರಶ್ಮಿ ಎಸ್ ರನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿ ನಿಯುಕ್ತಿಗೊಳಿಸಿದೆ.
ಉಡುಪಿ ನಗರಾಭಿವೃದ್ಧಿ ಪ್ರಧಿಕಾರದ ಆಯುಕ್ತರಾಗಿದ್ದ ಮಹೇಶ್ಚಂದ್ರ ಅವರನ್ನು ಕುಂದಾಪುರ ಉಪ ವಿಭಾಗಾಧಿಕಾರಿಯಾಗಿ ನೇಮಿಸಿ ಸರ್ಕಾರ ನಿಯುಕ್ತಿಗೊಳಿಸಿದೆ. ವರ್ಷದ ಹಿಂದೆಯಷ್ಟೇ ಕುಂದಾಪುರಕ್ಕೆ ವರ್ಗವಾಗಿ ಬಂದಿದ್ದ ರಶ್ಮಿ ಅವರು ಉತ್ತಮ ಸೇವೆಯ ಮೂಲಕ ಹಾಗೂ ಜನತೆಯೊಂದಿಗೆ ಸಹಜವಾಗಿ ಬೆರೆಯುವ ಮೂಲಕ ಗಮನ ಸೆಳೆದಿದ್ದರು. ಅವರ ವರ್ಗಾವಣೆಯಲ್ಲಿ ಬೈಂದೂರಿನ ಮಾಜಿ ಶಾಸಕನ ಕೈವಾಡವಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಅವರ ಒತ್ತಡಕ್ಕೆ ಮಣಿದ ಸರ್ಕಾರ, ದಕ್ಷ ಅಧಿಕಾರಿಗೆ ವರ್ಗಾವಣೆಯ ಶಿಕ್ಷೆ ನೀಡಿದೆ ಎಂಬ ಮಾತೂ ಕೇಳಿ ಬರುತ್ತಿದೆ.
ಬೈಂದೂರು ಮಾಜಿ ಶಾಸಕನ ಆಪ್ತನೋರ್ವನ ಜಾಗಕ್ಕೆ ಸಂಬಂಧಿಸಿ ತಕರಾರು ಇದ್ದು, ಅದಕ್ಕೆ ಎಸಿ ಸಹಕರಿಸಿರಲಿಲ್ಲ ಎನ್ನಲಾಗಿದೆ. ಆದರೂ ಕಾನೂನು ಮೀರಿ ತಕರಾರು ವಿಲೇವಾರಿ ಮಾಡುವಂತೆ ಅವರಿಗೆ ಒತ್ತಡ ಹೇರಲಾಗಿತ್ತು. ಆದರೆ, ಕಾನೂನು ವ್ಯಾಪ್ತಿಯಲ್ಲೇ ಕೆಲಸ ಮಾಡುವುದಾಗಿ ಎಸಿ ಹೇಳಿದ್ದರು. ಈ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಅವರನ್ನು ವರ್ಗಾಯಿಸಲಾಗಿದೆ ಎನ್ನಲಾಗುತ್ತಿದೆ. ನಿಷ್ಠಾವಂತ ಮಹಿಳಾ ಅಧಿಕಾರಿಯ ದಿಢೀರ್ ವರ್ಗಾವಣೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.