ಮಂಗಳೂರು: ಮಾಜಿ ಸಚಿವ ಹಾಗೂ ಶಾಸಕ ವಿನಯ ಕುಲಕರ್ಣಿ ಕೊಲೆ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿದ್ದಾರೆ. ಹಲವು ದಿನಗಳ ಕಾಲ ಜೈಲಿಗೆ ಹೋಗಿ ಬಂದಿರುವ ಅವರು, ಧಾರವಾಡ ಜಿಲ್ಲೆಯಿಂದ ಹೊರಗಿದ್ದಾರೆ. ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದಲೂ ಹೊರಗಿದ್ದು ವಿಧಾನಸಬೆ ಚುನಾವಣೆಯಲ್ಲಿ ಜಯಗಳಿಸಿದ್ದರು. ಸದ್ಯ ಮರಳಿ ಕ್ಷೇತ್ರಕ್ಕೆ ಬರುವ ಯತ್ನ ಮಾಡುತ್ತಿದ್ದು, ಕೋರ್ಟ್ ಇನ್ನೂ ಅನುಮತಿ ನೀಡಿಲ್ಲ. ಈ ವೇಳೆ ಅವರು ಕೊರಗಜ್ಜನ ಬಳಿ ಹೋಗಿದ್ದಾರೆ.
ಕೊರಗಜ್ಜನ ಬಳಿ ಸಂಕಷ್ಟದ ಬಗ್ಗೆ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಅರಿಕೆ ಮಾಡಿಕೊಂಡಿದ್ದರು. ಮುಂದಿನ ತಿಂಗಳು ಕ್ಷೇತ್ರ ಪ್ರವೇಶಕ್ಕಿರುವ ನಿರ್ಬಂಧದ ತೀರ್ಪಿನ ಕುರಿತು ಅವರು ಪ್ರಸ್ತಾಪಿಸಿದ್ದರು. ಇದಕ್ಕೆ ಪ್ರತಿಯಾಗಿ ದೈವ ನುಡಿದಿದ್ದು, 48 ದಿನಗಳ ಒಳಗೆ ಧಾರವಾಡ ಕ್ಷೇತ್ರ ಪ್ರವೇಶ ನಿರ್ಬಂಧ ತೆರವಿನ ಕುರಿತು ಕೊರಗಜ್ಜ ಅಭಯ ನೀಡಿದೆ. ಅಲ್ಲದೇ, ಎಚ್ಚರಿಕೆಯನ್ನೂ ನೀಡಿದೆ.
ಇನ್ನು ಮೂರು ವರ್ಷಗಳ ಕಾಲ ಬಹಳ ಸೂಕ್ಷ್ಮವಾಗಿ ಇರುವಂತೆ ದೈವ ಸೂಚಿಸಿದೆ. ಹೆಣ್ಣಿನ ಕಾರಣದಿಂದಲೇ ಈ ಎಲ್ಲಾ ಸಂಕಷ್ಟ ಎದುರಾಗಿದೆ. ಅಧರ್ಮದಲ್ಲಿ ಹೋದವರನ್ನು ನಾನು ನೋಡಿಕೊಳ್ಳುತ್ತೇನೆ. ಸಂಕಷ್ಟ ನಿವಾರಣೆ ನಂತರ ಸಂತೋಷದಿಂದ ಕೋಲಸೇವೆ ನೀಡುವಂತೆ ದೈವ ನುಡಿದಿದೆ. ಸದ್ಯ ಕೊರಗಜ್ಜನ ನುಡಿ ಕೇಳಿ ಶಾಸಕ ವಿನಯ ಕುಲಕರ್ಣಿ ಸಂತೋಷ ವ್ಯಕ್ತಪಡಿಸಿದ್ದಾರೆ.