ನವೆದಹಲಿ: ರೌಡಿಯೊಬ್ಬಾತ ಜೈಲಿನಿಂದ ಹೊರಗೆ ಬಂದ ಖುಷಿಯಲ್ಲಿ ರೋಡ್ ಶೋ ಮಾಡಿ ಈಗ ಮತ್ತೆ ಜೈಲು ಪಾಲಾಗಿರುವ ಘಟನೆ ನಡೆದಿದೆ.
ಹಲವರು ಜೈಲಿಂದ ಹೊರ ಬಂದರೆ ಸಾಕಪ್ಪ ಅಂತಾರೆ. ಆದರೆ, ಈ ಆಸಾಮಿ ಜೈಲಿಂದ ಹೊರ ಬಂದ ಖುಷಿಗೆ ರೋಡ್ ಶೋ ನಡೆಸಿ ಮತ್ತೆ ಜೈಲು ಪಾಲಾಗಿದ್ದಾನೆ. ಮಹಾರಾಷ್ಟ್ರದ ನಾಸಿಕ್ ನಲ್ಲಿ ಈ ಘಟನೆ ನಡೆದಿದೆ. ಗ್ಯಾಂಗ್ ಸ್ಟರ್ ಹರ್ಷದ್ ಪಟಾಣ್ಕರ್ ಎಂಬಾತನನ್ನೇ ಈಗ ಮತ್ತೆ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.
ಮಹಾರಾಷ್ಟ್ರ ಪೊಲೀಸರು ಮಾದಕವಸ್ತು ಅಪರಾಧಿಗಳು ಮತ್ತು ಅಪಾಯಕಾರಿ ವ್ಯಕ್ತಿಗಳ ಕಾಯ್ದೆ(MPDA) ಯಡಿ ಬಂಧಿಸಿದ್ದರು ಈತ ಜುಲೈ 23ರಂದು ಬಿಡುಗಡೆಗೊಂಡಿದ್ದ. ಆದರೆ, ಹೊರಗೆ ಬಂದಿದ್ದಕ್ಕೆ ಯುದ್ಧ ಗೆದ್ದು ಬಂದವರಂತೆ, ಸಾಧನೆ ಮಾಡಿದವರಂತೆ ರೋಡ್ ಶೋ ನಡೆಸಿದ್ದಾನೆ. ಬೆಥೆಲ್ ನಗರದಿಂದ ಅಂಬೇಡ್ಕರ್ ಚೌಕ್ ವರೆಗೂ ರ‍್ಯಾಲಿ ನಡೆಸಿದ್ದಾನೆ. ಸನ್ ರೂಫ್ ಇರುವ ಕಾರಿನಲ್ಲಿ ಹರ್ಷದ್ ತಲೆ ಹೊರಗೆ ಹಾಕಿ ನಗರದ ರಸ್ತೆಗಳಲ್ಲಿ ಕೈ ಬೀಸಿಕೊಂಡು ಮುಂದೆ ಸಾಗುತ್ತಿದ್ದರೆ ಆತನ ಹಿಂದೆ ಸುಮಾರು 15ರಿಂದ 20 ಬೈಕ್ ಗಳಲ್ಲಿ ಕೇಕೆ, ಶಿಳ್ಳೆ ಹಾಕುತ್ತಾ ಆತನ ಹಿಂಬಾಲಕರು ಮಜಾ ಮಾಡಿದ್ದಾರೆ.
ಕೆಲ ಪೊಲೀಸರು ಅಸಹಾಯಕರಾಗಿ ನೋಡುತ್ತಿದ್ದರೆ, ದಾರಿಹೋಕರು, ವೃದ್ಧರು ಹಿಡಿಶಾಪ ಹಾಕಿದ್ದಾರೆ. ಇದರಿಂದಾಗಿ ಟ್ರಾಫಿಕ್ ಕೂಡ ಉಂಟಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದರು. ಹೀಗಾಗಿ ಪೊಲೀಸರು ಈತನ ವಿರುದ್ಧ ಮತ್ತೊಂದು ಕೇಸ್ ಹಾಕಿ, ಈತನೊಂದಿಗ ಆತನ ಛೇಲಾಗಳನ್ನು ಕೂಡ ಜೈಲಿಗೆ ಅಟ್ಟಿದ್ದಾರೆ.