ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಜನಸಂಖ್ಯಾ ಸ್ಫೋಟವಾಗಿದ್ದು, ಚಿಂತೆಗೆ ಕಾರಣವಾಗಿದ್ದರೆ, ಜಪಾನ್ ಮಾತ್ರ ಜನಸಂಖ್ಯೆ ಕಡಿಮೆಯಾಗ್ತುತಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ 15 ವರ್ಷಗಳಿಂದ ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಹೆಚ್ಚು ದಾಖಲಾಗುತ್ತಿರುವುದು ಅಲ್ಲಿನ ಸರಕಾರದ ಚಿಂತೆಗೆ ಕಾರಣವಾಗಿದೆ.
2023ರಲ್ಲಿ ಜಪಾನ್ ನ ಒಟ್ಟು ಜನಸಂಖ್ಯೆಯಲ್ಲಿ 5.32 ಲಕ್ಷ ಜನರು ಕಡಿಮೆಯಾಗಿದ್ದಾರೆ. ಈ ವರ್ಷ ದೇಶದಲ್ಲಿ 7.30 ಲಕ್ಷ ಮಕ್ಕಳು ಜನಿಸಿದ್ದು, ಇದು ಸಾರ್ವಕಾಲಿಕವಾಗಿ ಅತಿ ಕಡಿಮೆ ಜನನ ಸಂಖ್ಯೆಯಾಗಿದೆ ಎನ್ನಲಾಗಿದೆ. ಇದೇ ವರ್ಷ ಜಪಾನ್ ನಲ್ಲಿ 15.8 ಲಕ್ಷ ಜನರು ಸಾವನ್ನಪ್ಪಿದ್ದಾರೆ.
2024ರ ಜನವರಿಯ ಲೆಕ್ಕಾಚಾರದಲ್ಲಿ ಜಪಾನ್‌ನ ಒಟ್ಟು ಜನಸಂಖ್ಯೆ 12.49 ಕೋಟಿಗೆ ಕುಸಿತ ಕಂಡಿದೆ. ಇದು ಇದೇ ರೀತಿ ಮುಂದುವರೆದರೆ ಜಪಾನ್ ನ ಜನಸಂಖ್ಯೆ 2070ರ ವೇಳೆಗೆ ಶೇ. 30ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿದು 5.8 ಕೋಟಿಗೆ ಇಳಿಯಬಹುದು. ಆಗ 10 ಜನರಲ್ಲಿ ನಾಲ್ಕು ಜನ 65 ವರ್ಷದ ಮೇಲ್ಪಟ್ಟವರಾಗಿರಲಿದ್ದಾರೆ. ಇದು ಜಪಾನ್ ಗೆ ತೀವ್ರ ಭಯ ಹುಟ್ಟಿಸಿದೆ.
ಜಪಾನ್ ನಲ್ಲಿ ಸತತ 15 ವರ್ಷಗಳಿಂದ ಜನಸಂಖ್ಯೆ ಇಳಿಕೆಯಾಗಿದೆ. ಜಪಾನ್ ಸರಕಾರ ದೇಶದ ಜನಸಂಖ್ಯೆ ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಕ್ಕಳಾಗುವ ದಂಪತಿಗಳಿಗೆ ಪ್ರೋತ್ಸಾಹಧನವಾಗಿ ನೀಡಲು ಬಜೆಟ್ ನಲ್ಲಿ ಬರೋಬ್ಬರಿ 5.30 ಟ್ರಿಲಿಯನ್ ಯೆನ್ (ಭಾರತೀಯ ರೂಪಾಯಿ ಲೆಕ್ಕದಲ್ಲಿ 2.85 ಲಕ್ಷ ಕೋಟಿ ರೂ.) ಹಣವನ್ನು ಮೀಸಲಿಟ್ಟಿತ್ತು. ಆದರೂ ಇದು ಯಶಸ್ಸು ಕಾಣುತ್ತಿಲ್ಲ.
ಜಪಾನ್‌ನ ಅತಿ ದೊಡ್ಡ ಸಮಸ್ಯೆ ಎಂದರೆ ಇಲ್ಲಿನ ಯುವ ಜನತೆ ಮದುವೆಯಾಗಲು ಹಾಗೂ ಮಕ್ಕಳನ್ನು ಹೊಂದಲು ಹಿಂದೇಟು ಹಾಕುತ್ತಿರುವುದು. ಇದಕ್ಕೆ ಕಾರಣ ಏನೆಂದರೆ, ಉದ್ಯೋಗ ಅವಕಾಶಗಳಲ್ಲಿ ಇಳಿಕೆ, ಸಂಬಳದಲ್ಲಿನ ಏರಿಕೆಯನ್ನೂ ಮೀರಿ ಹೆಚ್ಚುತ್ತಿರುವ ಜೀವನ ವೆಚ್ಚ, ದೇಶದಲ್ಲಿ ಹಬ್ಬಿರುವ ಕಾರ್ಪೊರೇಟ್ ಸಂಸ್ಕೃತಿ, ಮಹಿಳೆಯರು ಮತ್ತು ನೌಕರಸ್ಥ ಮಹಿಳೆಯರಿಗೆ ಮಕ್ಕಳು ಹೊರೆಯಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಜಪಾನ್ ನಲ್ಲಿ ಸದ್ಯ 12.49 ಕೋಟಿ ಇದೆ. ಮುಂದೆ ಇದು ಇನ್ನೂ ಕ್ಷೀಣಿಸಬಹುದು ಎನ್ನಲಾಗುತ್ತಿದೆ.