ಹುಬ್ಬಳ್ಳಿ: ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕಳ್ಳನಿಗೆ ಮಹಿಳಾ ಪಿಎಸ್ ಐ ಗುಂಡೇಟು ನೀಡಿರುವ ಘಟನೆ ನಡೆದಿದೆ.
ಈ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ. ಆರೋಪಿಯನ್ನು ಹೈದರಾಬಾದ್ ಮೂಲದ ಫರ್ಹಾನ್ ಶೇಖ್ ಗುಂಡೇಟು ತಿಂದ ಆರೋಪಿ. ಈತ ಕೇಶ್ವಾಪುರ ವ್ಯಾಪ್ತಿಯಲ್ಲಿ ಚಿನ್ನದ ಅಂಗಡಿ ಕಳ್ಳತನ ಮಾಡಿದ್ದ. ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಈತನನ್ನು ಜುಲೈ 25ರಂದು ಬಂಧಿಸಿದ್ದರು.
ತನಿಖೆಯಲ್ಲಿ ಈತ ಅಂತರ್ ರಾಜ್ಯ ಕಳ್ಳ ಎಂಬುವುದು ಗೊತ್ತಾಗಿತ್ತು. ವಿವಿಧ ರಾಜ್ಯಗಳಲ್ಲಿ ನಡೆದ ಕೊಲೆ, ಡಕಾಯಿತಿ ಮತ್ತು ದರೋಡೆ ಪ್ರಕರಣದಲ್ಲಿ ಈ ಆರೋಪಿ ಭಾಗಿಯಾಗಿದ್ದ ಎನ್ನುವುದು ಪೊಲೀಸರಿಗೆ ಗೊತ್ತಾಗಿತ್ತು. ಹೀಗಾಗಿ ಈತನಿಗೆ ಸಹಕಾರ ನೀಡಿದ ಇತರೆ ಆರೋಪಿಗಳನ್ನು ಬಂಧಿಸಲು ಗಾಮನ ಗಟ್ಟಿ ರಸ್ತೆಯ ತಾರಿಹಾಳ ಕ್ರಾಸ್ ಬಳಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಕಾನ್ಸ್ಟೇಬಲ್ ಸುಜಾತ ಹಾಗೂ ಮಹೇಶ್ ಎಂಬವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪಿಎಸ್‌ಐ ಕವಿತಾ ಗಾಳಿಯಲ್ಲಿ 2 ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆದರೂ ಈತ ಪರಾರಿಯಾಗಲು ಯತ್ನಿಸಿದ್ದು ಆತನ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಗಾಯಗೊಂಡ ಪೊಲೀಸ್ ಸಿಬ್ಬಂದಿ ಮತ್ತು ಆರೋಪಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.