ಬೆಂಗಳೂರು: ನನ್ನ ಹೆಸರಿಗೆ ಮಸಿ ಬಳಿಯುವುದಕ್ಕಾಗಿ ಮುಡಾ ಹಗರಣದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಇಂದು ಕೂಡ ವಿಪಕ್ಷಗಳು ಬಾವಿಗಳಿದು ಮೂಡು ಹಗರಣದ ಬಗ್ಗೆ ಚರ್ಚೆಗೆ ಅವಕಾಶ ಕೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದು ವಿಷಯವೇ ಅಲ್ಲ. ನನ್ನ ವಿರುದ್ದ ಹೊಟ್ಟೆ ಕಿಚ್ಚಿನಿಂದ ವಿಪಕ್ಷಗಳು ಮುಡಾ ಹಗರಣದಲ್ಲಿ (MUDA Scam) ರಾಜಕೀಯ ಮಾಡುತ್ತಿವೆ ಎಂದು ಕಿಡಿಕಾರಿದರು.
ನಿಯಮಾವಳಿಯಂತೆಯೇ ಸೈಟ್ ಪಡೆಯಲಾಗಿದೆ. ಕಾನೂನು ಪ್ರಕಾರವೇ ಎಲ್ಲಾ ಆಗಿದೆ. ಮುಡಾ ಸೈಟ್ ಕೊಟ್ಟಾಗ ಬಿಜೆಪಿಯೇ ಅಧಿಕಾರದಲ್ಲಿ ಇತ್ತು. ಆದರೆ, ಅದೇ ಪಾರ್ಟಿ ಈಗ ಪ್ರತಿಭಟನೆ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೈಟ್ ತೆಗೆದುಕೊಂಡಿರುವುದರಲ್ಲಿ ನನ್ನ ತಪ್ಪಿಲ್ಲ. 50:50 ನಿಯಮ ಮಾಡಿದ್ದು ಬಿಜೆಪಿ ಅವಧಿಯಲ್ಲಿ. ನಮ್ಮ ಜಮೀನಿಗೆ ಪರ್ಯಾಯವಾಗಿ ನಾವು ಸೈಟ್ ಕೇಳಿದಾಗ ಮೂಡಾ ಸೈಟ್ ಕೊಟ್ಟಿದೆ. ನಾವೇನು ಇದೇ ಜಾಗ ಬೇಕು ಎಂದು ಕೇಳಿಲ್ಲ. ಅವರು ಕೊಟ್ಟಿದ್ದನ್ನೇ ನಾವು ಪಡೆದಿದ್ದೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹೀಗಾಗಿ ವಿಪಕ್ಷಗಳ ಪ್ರತಿಭಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. 40 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಹೀಗಾಗಿ ಹೊಟ್ಟೆಕಿಚ್ಚಿನಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.