ಬೆಂಗಳೂರು: ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದ ಬಿಜೆಪಿ ನಾಯಕರು ಇಂದು ಕೂಡ ಮುಡಾ ಹಗರಣದ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. ಹೀಗಾಗಿ ನಿರಂತರವಾಗಿ ಗಲಾಟೆ ಗದ್ದಲ ಮುಂದುವರೆದಿತ್ತು. ಈ ಗಲಾಟೆ ನಡುವೆಯೇ ಕೆಲವು ವಿಧೇಯಕ ಅಂಗೀಕಾರ ಮಾಡಲಾಗಿದೆ.
ನೀಟ್ ಪರೀಕ್ಷೆ (Neet Exam) ರದ್ದುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಅಲ್ಲದೇ, ಸಿಇಟಿ ಅಂಕಗಳನ್ನೇ ಆಧರಿಸಿ ಪ್ರವೇಶಾತಿ ನೀಡಬೇಕೆಂದು ಒತ್ತಾಯಿಸಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು NEET ರದ್ದತಿಗೆ ಕೋರಿ ನಿರ್ಣಯ ಮಂಡಿಸಿದರು. ಸಿಇಟಿ ಅಂಕಗಳನ್ನು ಆಧರಿಸಿ ಪ್ರವೇಶಾತಿ ನೀಡಬೇಕೆಂದು ಒತ್ತಾಯಿಸಲಾಯಿತು.
ಒನ್ ನೇಷನ್, ಒನ್ ಎಲೆಕ್ಷನ್ ವಿರೋಧಿಸಿ ವಿಧಾನಪರಿಷತ್ ನಲ್ಲಿ ಸಿಎಂ ಸಿದ್ದರಾಮಯ್ಯ ನಿರ್ಣಯ ಮಂಡಿಸಿದರು. ಬಿಜೆಪಿ, JDS ಸದಸ್ಯ ಬಲ ಹೆಚ್ಚಿದ್ದರೂ ಗದ್ದಲದಿಂದ ನಿರ್ಣಯ ಪಾಸ್ ಮಾಡಲಾಗಿದೆ. ಹೊಸ ಜನಗಣತಿಯ ಆಧಾರದಲ್ಲಿ ಕ್ಷೇತ್ರ ಪುನರ್ ವಿಂಗಡಣಾ ಪ್ರಕ್ರಿಯೆ ನಡೆಸಬಾರದು ಮತ್ತು ಜನಸಂಖ್ಯೆ ಆಧರಿಸಿ ಸ್ಥಾನಗಳ ಹೆಚ್ಚಿಸುವ ಸಂದರ್ಭದಲ್ಲಿ ಪ್ರತಿ ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ಲೋಕಸಭಾ ಮತ್ತು ವಿಧಾನಸಭೆ ಸ್ಥಾನಗಳನ್ನು 1971ರ ಜನಗಣತಿ ಆಧರಿಸಿ ನಿರ್ಧರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಅಂಗೀಕಾರಿಸಲಾಯಿತು. ಮೈತ್ರಿಯ ಯಾವುದೇ ಬೇಡಿಕೆಗೆ ಮಣಿಯದೇ ನಿರ್ಣಯಗಳನ್ನು ಅಂಗೀಕರಿಸಲಾಯಿತು.