ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮಾನ್ ಇಂದು ಬಜೆಟ್ ಮಂಡಿಸಿದ್ದಾರೆ. ಆದರೆ, ಕರ್ನಾಟಕಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಆಂಧ್ರ ಪ್ರದೇಶ, ಬಿಹಾರ್ ಗೆ ಮಾತ್ರ ಈ ಬಜೆಟ್ ಸೀಮಿತವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಆಂಧ್ರ, ಬಿಹಾರಕ್ಕೆ ಹೆಚ್ಚು ನೆರವು ನೀಡಲಾಗಿದೆ ಎಂದು ವಿಪಕ್ಷಗಳು ಟೀಕೆ ಮಾಡುತ್ತಿವೆ. ರಾಜ್ಯ ಇಬ್ಬಾಗವಾದಗ ಆಂಧ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಘೋಷಣೆ ಮಾಡಿದ್ದೇ ಕಾಂಗ್ರೆಸ್ ಆದರೆ ಜಾರಿಗೆ ತಂದಿರಲಿಲ್ಲ. ಈಗ ಪ್ರಧಾನಿ ಮೋದಿ ಜಾರಿಗೆ ತಂದಿದ್ದಾರೆ. ನಮ್ಮ ರಾಜ್ಯದ ಯೋಜನೆಗಳು ಯಾವುದು ಇಲ್ಲ ಎನ್ನುವ ಆರೋಪವಿದೆ. ನಮ್ಮ ರಾಜ್ಯದ ಹೆಸರು ಇಲ್ಲದಿದ್ದರೂ ಹಣ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.
ಗ್ರಾಮೀಣ ಅಭಿವೃದ್ಧಿಗೆ 2.65 ಲಕ್ಷ ಕೋಟಿ ಹಣ ಹಂಚಿಕೆ ಮಾಡಲಾಗಿದೆ. ದೇಶದ ಸಮಗ್ರ ಅಭಿವೃದ್ಧಿಗೆ ಬಜೆಟ್ ಪೂರಕವಾಗಿದೆ. ಕಾಂಗ್ರೆಸ್ ನವರು ಮೊದಲು ಟೀಕೆ ಮಾಡುವುದನ್ನು ನಿಲ್ಲಿಸಬೇಕು. ನಾವು ರಾಜ್ಯಕ್ಕೆ ಬಂದರೆ, ಯಾಕೆ ಬಂದ್ರಿ ಅಂತಾರೆ. ಈಗ ರಾಜ್ಯಕ್ಕೆ ಏನು ತಂದರು ಎಂದು ಕೇಳುತ್ತಾರೆ. ಪ್ರಧಾನಿಯವರನ್ನು ಭೇಟಿಯಾಗಿ ರಾಜ್ಯಕ್ಕೆ ಯೋಜನೆಗಳನ್ನು ತರಲು ನಾನು ಶ್ರಮಿಸುತ್ತೇನೆ. ಒಂದು ತಿಂಗಳಲ್ಲೇ ಎಲ್ಲವನ್ನು ತಂದು ಇಳಿಸಲು ಸಾಧ್ಯವಿಲ್ಲ. ಆದರೆ, ರಾಜ್ಯಕ್ಕೆ ಪೂರಕವಾಗುವ ಯೋಜನೆಗಳನ್ನು ತರುತ್ತೇನೆ ಎಂದು ಭರವಸೆ ನೀಡಿದ್ದಾರೆ.
2047ಕ್ಕೆ ಅಮೃತಕಾಲದ ದೂರದೃಷ್ಟಿಯ ಬಜೆಟ್ ಇದಾಗಿದೆ. ಕೌಶಲ್ಯ ತರಬೇತಿ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದ್ದಾರೆ. 4.10ಕೋಟಿ ಉದ್ಯೋಗ ಸೃಷ್ಟಿಗೆ ಯೋಜನೆ ರೂಪಿಸಿದ್ದಾರೆ ಎಂದು ಹೇಳಿದ್ದಾರೆ.