ಬೆಂಗಳೂರು: ಕರ್ನಾಟಕದ ಐವರು ಸಚಿವರಿದ್ದರೂ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಬಾರಿಯೂ ಬಿಜೆಪಿಯು ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ. ಮೈತ್ರಿಗೆ ಸಹಕಾರ ನೀಡಿರುವ ಪಕ್ಷಗಳಿರುವ ಬಿಹಾರ, ಆಂಧ್ರಪ್ರದೇಶ ಬಿಟ್ಟರೆ ಬೇರೆ ರಾಜ್ಯಗಳಿಗೆ ಸಂಪೂರ್ಣ ಅನ್ಯಾಯವಾಗಿದೆ. ದೇಶದ ಇನ್ನಿತರ ರಾಜ್ಯಗಳು ಇವರಿಗೆ ಕಣ್ಣಿಗೆ ಕಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕಕ್ಕೆ ವಿಶೇಷ ಅನುದಾನ ನೀಡುತ್ತಾರೆಂಬ ನಿರೀಕ್ಷೆಯಿತ್ತು. ಆದರೆ, ಯಾವುದೇ ಅನುದಾನ ನೀಡದೆ ನಿರ್ಲಕ್ಷಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ, ಪೆರಿಫೆರಲ್ ರಿಂಗ್ ರಸ್ತೆಗೆ ಕೇಂದ್ರ ಸರ್ಕಾರ ನಯಾಪೈಸೆ ಕೊಟ್ಟಿಲ್ಲ. ನಿರ್ಮಲಾ ಸೀತಾರಾಮನ್ ಮೇಲಿದ್ದ ನಿರೀಕ್ಷೆ ಸಂಪೂರ್ಣ ಸುಳ್ಳಾಗಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದ ಐವರು ಸಚಿವರಿದ್ದರೂ ಏನನ್ನೂ ಕೊಟ್ಟಿಲ್ಲ. ರಾಜ್ಯದ ಎಚ್.ಡಿ.ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಸಚಿವರಾಗಿದ್ದಾರೆ. ಕೈಗಾರಿಕಾ ಕ್ಷೇತ್ರ, ರೈಲ್ವೆ ಇಲಾಖೆಗೆ ಏನೂ ಸಿಕ್ಕಿಲ್ಲ. ಬಜೆಟ್ ಮೂಲಕ ರೈತರಿಗೆ ಕೇಂದ್ರ ಸರ್ಕಾರ ಪಂಗನಾಮ ಹಾಕಿದೆ ಎಂದು ಲೇವಡಿ ಮಾಡಿದ್ದಾರೆ.
ಪ್ರೀ ಬಜೆಟ್ ನಲ್ಲಿ ಅನೇಕ ವಿಷಯ ಹೇಳಿದ್ದರು, ನಾನು ಹೋಗಲು ಆಗಲಿಲ್ಲ. ಹೀಗಾಗಿ ಆಗ ಕೃಷ್ಣಬೈರೇಗೌಡರನ್ನ ನಾನು ಕಳುಹಿಸಿ ಕೊಟ್ಟಿದೆ. 5400 ಕೋಟಿ ರೂ. ಕೊಡಬೇಕೆಂದು ಶಿಫಾರಸ್ಸು ಮಾಡಲಾಗಿತ್ತು. ನಿರ್ಮಲಾ ಸೀತಾರಾಮ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದಾರೆ. ಹೀಗಾಗಿ ನಮ್ಮ ಪರ ಇರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಅವರು ಆಯ್ಕೆಯಾಗಿ ಹೋದ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಫೆರಿಫರಲ್ ರಿಂಗ್‌ರಸ್ತೆಗೆ 6 ಸಾವಿರ ಕೋಟಿ ರೂ, ಅಪ್ಪರ್ ಭದ್ರಕ್ಕೆ 5300 ಕೋಟಿ ರೂ, ನಗರ ವಸತಿ ಯೋಜನೆಗಳಿಗೆ 1.2 ರಿಂದ 3 ಲಕ್ಷ ರೂ. ಕೊಡುತ್ತೇವೆಂದು ಕೊಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಜೆಟ್ ನಿಂದ ರೈತರಿಗೆ ಯಾವುದೇ ಉತ್ತಮ ಯೋಜನೆ ಬಂದಿಲ್ಲ. ಬಡವರು, ರೈತರು, ಮಹಿಳೆಯರು, ಅಲ್ಪಸಂಖ್ಯಾತರಿಗೆ ಅಂತ ಹೇಳಿದ್ರು. ಇದೀಗ ಈ ವರ್ಗದ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.