ಬೆಂಗಳೂರು ವಾಲ್ಮೀಕಿ ಅಭಿವೃದ್ದಿ ನಿಗಮ (Valmiki Scheduled Tribes Development Corporation)ದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ (B Nagendra) ಇಡಿ ವಶದಲ್ಲಿದ್ದು, ಕೋರ್ಟ್ ಆಗಸ್ಟ್ 3ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ವೇಳೆ ಇಡಿ ಅಧಿಕಾರಿಗಳು ಸತ್ಯನಾರಾಯಣ ವರ್ಮನನ್ನು ಬಾಡಿವಾರೆಂಟ್ ಮೇಲೆ ನಮಗೆ ನೀಡಿ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಸತ್ಯನಾರಾಯಣ ವರ್ಮನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದು, ಸದ್ಯ ಆರೋಪಿ ಪರಪ್ಪನ ಅಗ್ರಹಾರದಲ್ಲಿದ್ದಾನೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಭಾನುವಾರ ವಿಚಾರಣೆ ನಡೆಸಿದ್ದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆಯಿಂದ 18 ಖಾತೆಗಳಿಗೆ ಬರೋಬ್ಬರಿ 94.73 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆಯಾಗಿತ್ತು. ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಹಣ ವರ್ಗಾವಣೆಯಾಗಿತ್ತು. ಈ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್ ಐಟಿ ರಚಿಸಿತ್ತು. ಹಗರಣದ ಕುರಿತು ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್, ಮಾಜಿ ಸಚಿವ ಬಿ. ನಾಗೇಂದ್ರ ಅವರ ಅಪ್ತ ಎನ್ನಲಾದ ನಾಗರಾಜ್ ನೆಕ್ಕುಂಟಿ, ನಾಗೇಶ್ವರ್ ರಾವ್ ಎಂಬುವವರನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದರು.
ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ (ಜು.10) ಬೆಳ್ಳಂ ಬೆಳಗ್ಗೆ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದ್ದರು. ಸದ್ಯಬಿ. ನಾಗೇಂದ್ರ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.