ಇನ್ಮುಂದೆ ಸಾರಿಗೆ ಇಲಾಖೆಯ ಕರ್ತವ್ಯದಲ್ಲಿರುವಾಗ ಚಾಲಕರು ಹಾಗು ನಿರ್ವಾಹಕರು ಯಾವುದೇ ಕಾರಣಕ್ಕೂ ರೀಲ್ಸ್ ಮಾಡುವಂತಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಖಡಕ್ ಸೂಚನೆ ಕೊಟ್ಟಿದ್ದಾರೆ. ರೀಲ್ಸ್ ಹುಚ್ಚಿಗೆ ಅನಾಹುತಗಳು ಹೆಚ್ಚಾಗುವ ಲೆಕ್ಕಾಚಾರದಲ್ಲಿ ಈ ತೀರ್ಮಾನಕ್ಕೆ ಬರಲಾಗಿದ್ದು, ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಕೊಟ್ಟರು.

ಕಳೆದ ಮೇ ತಿಂಗಳಲ್ಲಿ ಧಾರವಾಡ ಘಟಕದ ಬಸ್ಸಿನಲ್ಲಿ ಬೆಟಗೇರಿ-ಧಾರವಾಡ ಸಂಚಾರ ಮಾಡುತ್ತಿದ್ದಾಗ ಚಾಲಕ ಛತ್ರಿ ಹಿಡಿದು ಬಸ್ ಓಡಿಸಿದ್ದು ಸಖತ್ ವೈರಲ್ ಆಗಿತ್ತು. ಮಳೆ ಬರುತ್ತಿದ್ದ ಸಮಯಕ್ಕೆ ಬಸ್ ಒಳಗೆ ಚಾಲಕ ಛತ್ರಿ ಹಿಡಿದು ಬಸ್ ಓಡಿಸುವಾಗ, ನಿರ್ವಾಹಕಿ ಮಹಿಳೆ ರೀಲ್ಸ್ ಚಿತ್ರೀಕರಿಸಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಕುಂಟುತ್ತಿರುವ ಗ್ಯಾರಂಟಿಗಳ ನಡುವೆಯೂ, ಜನಗಳಿಗೆ ಹೊಸದಾಗಿ ‘ಛತ್ರಿ ಭಾಗ್ಯ’ ಸಿಗಲಿದೆ ಎಂಬಂತೆಲ್ಲಾ ಬಿಂಬಿಸಿ ನೆಟ್ಟಿಗರು ವೈರಲ್ ಮಾಡಿದ್ದರು. ರಾಜ್ಯ ಬಿಜೆಪಿಗರೂ ಸಹ ರೀಲ್ಸ್ ವೈರಲ್ ಮಾಡಿಸಿ ಸರ್ಕಾರವನ್ನು ಮುಜುಗರಕ್ಕೆ ತಳ್ಳಿದ್ದರು. ಇನ್ನೊಂದೆಡೆ ಹುಬ್ಬಳ್ಳಿಯಿಂದ ಬಾಗಲಕೋಟೆ ಕಡೆ ಬರುತ್ತಿದ್ದ ಬಸ್ ನ ಚಾಲಕ ರೀಲ್ಸ್ ಮಾಡಲು ಹೋಗಿ, ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದ ಎತ್ತಿನ ಗಾಡಿಗೆ ಹಿಂಬದಿಯಿಂದ ಹೋಗಿ ಬಸ್ ಗುದ್ದಿದ್ದ. ಪರಿಣಾಮವಾಗಿ ಎರಡು ಎತ್ತುಗಳು ಸ್ಥಳದಲ್ಲೇ ಸತ್ತು, ಗಾಡಿ ಹೊಡೆಯುತ್ತಿದ್ದ ವ್ಯೆಕ್ತಿಯ ಮೆದುಳು ಕಿತ್ತು ಬಂದು ನಿಷ್ಕ್ರೀಯಗೊಂಡಿತ್ತು. ಈ ಘಟನೆಯಂತೂ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಇವೆಲ್ಲವನ್ನೂ ಗಮನಿಸಿದ ಸಾರಿಗೆ ಇಲಾಖೆಯು ಸದ್ಯ ಕ್ರಮಕ್ಕೆ ಮೂಂದಾಗಿದೆ. ಇಂಥ ಘಟನೆಗಳು ಹೆಚ್ಚುವ ಭೀತಿಯಲ್ಲಿ ಸಾರಿಗೆ ಸಚಿವರು ಖಡಕ್ ಸೂಚನೆ ಕೊಟ್ಟಿದ್ದಾರೆ. ಕರ್ತವ್ಯದಲ್ಲಿರುವಾಗ ಚಾಲಕರಾಗಲಿ, ನಿರ್ವಾಹಕರಾಗಲಿ ರೀಲ್ಸ್ ಮಾಡುವಂತಿಲ್ಲ. ಮಾಡಿದರೆ ಕಟ್ಟು ನಿಟ್ಪಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
