ನಟ ಸೋನು ಸೋದ್ ಮಾನವೀಯ ಕಳಕಳಿಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತದೆ. ಆದರೆ, ಅವರ ಒಂದು ಹೇಳಿಕೆ ಈಗ ಇಡೀ ರಾಷ್ಟ್ರದ ಕಂಗೆಣ್ಣಿಗೆ ಗುರಿಯಾಗುವಂತೆ ಮಾಡಿದೆ.
ಇತ್ತೀಚೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಸೋನು ಸೂದ್, ತಮ್ಮ ಸಹೋದರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿ, ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸಿದ್ದರು. ಇದು ಬಿಜೆಪಿ ಬೆಂಬಲಿಗರ ಕಣ್ಣು ಕೆಂಪಗಾಗಿಸಿತ್ತು. ಈ ಮಧ್ಯೆ ಸೋನು ಸೂದ್ ಮಾಡಿರುವ ಟ್ವೀಟ್ ಒಂದು ಬಿಜೆಪಿ ಬೆಂಬಲಿಗರು ಮಾತ್ರವೇ ಅಲ್ಲದೆ ಬಿಜೆಪಿಯ ಕೆಲ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
ಮುಸ್ಲಿಂ ವ್ಯಕ್ತಿಯೊಬ್ಬ ರೋಟಿಯನ್ನು ತಂದೂರಿನಲ್ಲಿ ಇಡುವುದಕ್ಕೂ ಮುನ್ನ ಅದಕ್ಕೆ ಉಗಿಯುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಶೇರ್ ಮಾಡಿದ ಸೋನು ಸೂದ್, ‘ಶಬರಿ, ರಾಮನ ಎಂಜಲು ಹಣ್ಣನ್ನು ತಿಂದಳು. ಹಿಂಸೆಯನ್ನು ಸೋಲಿಸಲು ಈ ಸಹೋದರನ ಎಂಜಲು ಮೆತ್ತಿದ ರೋಟಿಯನ್ನು ನಾನೇಕೆ ತಿನ್ನದೇ ಇರುವೆ. ಮಾನವೀಯತೆ ಎಲ್ಲೆಡೆ ಪಸರಿಸಬೇಕು ಅಷ್ಟೆ’ ಎಂದು ಬರೆದುಕೊಂಡಿದ್ದರು.
ಆದರೆ, ಈ ಟ್ವೀಟ್ ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹೇಳಿಕೆಯನ್ನು ವ್ಯಂಗ್ಯ ಮಾಡಿರುವ ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್, ‘ಮುಂದೆ ಸೋನು ಸೂದ್ ತಮ್ಮದೇ ಆವಿಷ್ಕಾರದ ಮೂಲಕ ಹೊಸ ರಾಮಾಯಣದ ಕತೆ ಬರೆದು, ಬಾಲಿವುಡ್ ನಲ್ಲಿ ಹೊಸ ರಾಮಾಯಣ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ. ಅವರಷ್ಟೇ ಅಲ್ಲದೇ, ಈ ಸೋನು ಸೂದ್ ಹೇಳಿಕೆಗೆ ಹಲವರು ಭಾರೀ ಆಕ್ರೋಶ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ.