ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ವೃತ್ತಿರಂಗದಲ್ಲಿ “ಸಹೃದಯೀ ನಿರ್ದೇಶಕ” ಎಂದೇ ಪ್ರೀತಿ ಪಾತ್ರರಾಗಿದ್ದ ದೊಂಡಾಲೆಯವರು, ಬೆಂಗಳೂರಿನ ನಾಗರಬಾವಿಯ ತಮ್ಮ ಸ್ವ-ಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಅನೇಕರಿಗೆ ಈ ದುರಂತ ಸಾವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ!
ಯಶೋಧೆ, ನಾ ನಿನ್ನ ಬೀಡಲಾರೆ, ಶಾಂತಂ ಪಾಪಂ, ಚರಣದಾಸಿ, ಕರಿಮಣಿ, ಗಂಗೆ-ಗೌರಿ, ನನ್ನರಸಿರಾಧೆ, ತ್ರಿಪುರ ಸುಂದರಿ ಸೇರಿದಂತೆ ಹಲವು ಧಾರಾವಾಹಿಗಳನ್ನು ಇವರು ನಿರ್ದೇಶಿಸಿದ್ದರು. ಸದ್ಯ ನೀನಾಸಂ ಸತೀಶ್ ನಟನೆಯ “ಅಶೋಕ ಬ್ಲೇಡ್” ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದರು. “ವೃದ್ಧಿ ಕ್ರಿಯೇಷನ್” ಬ್ಯಾನರಿನಡಿ ಈ ಚಿತ್ರದ ನಿರ್ಮಾಣದಲ್ಲೂ ದೊಂಡಾಲೆ ಹೊಣೆಹೊತ್ತಿದ್ದರು. ಈ ಹಿಂದೆಯೂ ತಮ್ಮ ನಿರ್ದೇಶನದ ಧಾರಾವಾಹಿಗಳಿಗೂ ನರಹರಿ ಎಂಬ ಗೆಳೆಯನ ಜೊತೆ ಸೇರಿ “ವೃದ್ಧಿ ಕ್ರಿಯೇಶನ್” ಮೂಲಕ ಹಣ ಹೂಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಅಶೋಕ ಬ್ಲೇಡ್ ಚಿತ್ರದ ಮೇಲೆ ಹಣ ಹೂಡುತ್ತಲೇ ಬಂದಿದ್ದು, ಸ್ವಲ್ಪ ಅತಿಯಾದ ಖರ್ಚುವೆಚ್ಚಕ್ಕಾಗಿ ಇವರ ಮೇಲೆ ಸಾಲದ ಹೊರೆ ಬಿದ್ದಿತ್ತು ಎನ್ನಲಾಗಿದೆ. ಜೊತೆಗೆ ಈ ಹಿಂದೆ ನಿರ್ದೇಶಿಸಿ, ನಿರ್ಮಿಸಿದ್ದ ‘ತ್ರಿಪುರ ಸುಂದರಿ’ ಧಾರಾವಾಹಿಯ ಪ್ರಾರಂಭದ ಸಂಚಿಕೆಗಳನ್ನು ವಾಹಿನಿಯವರು, ಮರು ಚಿತ್ರೀಕರಣ ಮಾಡಿಸಿದ್ದ ಪರಿಣಾಮವಾಗಿ, ಅಲ್ಲೊಂದಷ್ಟು ಲಕ್ಷಗಟ್ಟಲೆ ಹಣ ತಲೆಗೆ ಬಂದಿತ್ತು. ಆ ಹೊರೆಯ ಮಧ್ಯೆ, ಈ ಚಿತ್ರದ ಅತಿಯಾದ ಸಾಲವೂ ಸೇರಿ, ವೈಯಕ್ತಿಕವಾಗಿ ಹಿಂಸೆ ಅನುಭವಿಸುತ್ತಿದ್ದು, ಅದೇ ಲೆಕ್ಕಾಚಾರದಲ್ಲಿ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ ಎನ್ನಲಾಗಿದೆ.

ನಿನ್ನೆ ಸಂಜೆ ನಾಯಕ ನಿನಾಸಂ ಸತೀಶ್ ಮತ್ತು ತಂಡದ ಜೊತೆ ಅಶೋಕ ಬ್ಲೇಡ್ ಸಿನಿಮಾದ ಮುಂದಿನ ಕಾರ್ಯಗಳ ಬಗ್ಗೆ ಮಾತುಕತೆ ನಡೆಸಿ ಬಂದಿದ್ದ ವಿನೋದ್ ದೊಂಡಾಲೆ, ಏಕಾ-ಏಕಿ ಆತ್ಮಹತ್ಯೆಯ ನಿರ್ಧಾರಕ್ಕೆ ಬರುವ ನಡುವೆ ಏನಾದರೂ ಘಟಿಸಿರಬಹುದೇ ಎಂಬ ಸಂದೇಹದಡಿ ವಿಚಾರಣೆಯೂ ನಡೆಯಲಿದೆ. ಸದ್ಯ ವಿಕ್ಟೋರಿಯ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಮ್ ಆಗಿದೆ. ಮುಂದಿನ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದೆ.