ಕಳೆದ ಕೆಲ ದಿನಗಳಿಂದ ನಿರಂತರ ಮಳೆಯಿಂದಾಗಿ, ಬೈಂದೂರು ಸಮೀಪದ ಒತ್ತಿನೆಣೆಯಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ.
ಇತ್ತೀಚೆಗೆ ಅಂಕೋಲಾದ ಶಿರೂರಿನಲ್ಲಿ ನಡೆದ ಭೀಕರ ಗುಡ್ಡ ಕುಸಿತದ ದುಷ್ಪರಿಣಾಮ, ಮಣ್ಣಿನಡಿ ಸಿಲುಕಿ ಸತ್ತ ಸುದ್ದಿ ಇನ್ನೂ ಹಸಿ ಇರುವಾಗಲೇ, ಮತ್ತೊಂದಷ್ಟು ಗುಡ್ಡಗಳು ಕುಸಿತದ ಭೀತಿ ಹುಟ್ಟಿಸಿದೆ. ಅದರಲ್ಲೂ ಈ ಬೈಂದೂರಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ವೇಳೆ ಕೊರೆತಕ್ಕೆ ಒತ್ತಿನೆಣೆ ಗುಡ್ಡವು ಕುಸಿಯುವ ಸಂಭವ ಹೆಚ್ಚಿದಂತಿದೆ. ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಪಕ್ಕದ ಗುಡ್ಡ ನಿಧಾನವಾಗಿ ಮಣ್ಣು ಜರುಗಿಸುತ್ತಾ ಆತಂಕ ಮೂಡಿಸಿದೆ.

ಹಾಗೆ ನೋಡಿದರೇ, ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿಯೂ ಇಲ್ಲಿ ಗುಡ್ಡ ಕುಸಿಯುವ ಭೀತಿ ಸೃಷ್ಟಿಯಾಗುತ್ತದೆ. ಮುನ್ನೆಚ್ಚರಿಕೆ ಇಲ್ಲದ ಕಳಪೆ ಕಾಮಗಾರಿಯ ಪರಿಣಾಮ, ಸದ್ಯ ಒತ್ತಿನೆಣೆಯಲ್ಲಿ ನಿಧಾನವಾಗಿ ಗುಡ್ಡ ಜರಿಯಲು ಶುರುವಾಗಿದ್ದು, ಮಳೆ ಹೀಗೆ ಮುಂದುವರೆದರೆ ಸಂಪೂರ್ಣ ಗುಡ್ಡವು, ಹೆದ್ದಾರಿ ಮೇಲೆ ಕುಸಿಯುವ ಆತಂಕ ಎದುರಾಗಿದೆ. ಒಂದು ವೇಳೆ ಗುಡ್ಡ ಕುಸಿದು ಬಿದ್ದರೇ, ಭಾರೀ ಅನಾಹುತ ಸಂಭವಿಸಲಿದೆ. ಉತ್ತರ ಕನ್ನಡ – ಉಡುಪಿ ಸಂಪರ್ಕ ಬಂದ್ ಆಗಲಿದೆ.

ಐ ಆರ್ ಬಿ ಸಂಸ್ಥೆಯಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಲಾಗಿತ್ತು. ಆ ವೇಳೆ ಅವರ ನಡೆಸಿದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪ್ರತೀ ವರ್ಷ ಇಂತಹ ಗುಡ್ಡ ಕುಸಿತದ ಭೀತಿ ಎದುರಿಸುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಈ ಒತ್ತಿನೆಣೆಯಲ್ಲಿ ಪ್ರತಿನಿತ್ಯ ವಾಹನ ಸವಾರರು, ಭಯದಿಂದಲೇ ಸಂಚರಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮದೊಂದಿಗೆ ಮುನ್ನೆಚ್ಚರಿಕೆ ವಹಿಸಿಬೇಕಿದೆ.