ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರನ್ನು ರಸ್ತೆಯಲ್ಲಿಯೇ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಅಲ್ಲಿನ ಪಲ್ನಾಡು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಯುವಕನೊಬ್ಬ ಮಚ್ಚಿನಿಂದ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತ ವ್ಯಕ್ತಿಯನ್ನು ರಶೀದ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ವ್ಯಕ್ತಿಯ ಎರಡೂ ಕೈಗಳು ತುಂಡಾಗಿದ್ದು, ಕುತ್ತಿಗೆಗೆ ಆಳವಾದ ಗಾಯವಾಗಿದೆ. ಇದೊಂದು ಭಯಾನಕ ಘಟನೆ ಎಂದು ಮೂಲಗಳು ಹೇಳಿವೆ.
ಹಲ್ಲೆ ನಡೆಯುತ್ತಿದ್ದಂತೆ ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವೈಯಕ್ತಿಕ ದ್ವೇಷವೇ ಈ ಭೀಕರ ಹತ್ಯೆಗೆ ಕಾರಣ ಎಂಬುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಪಕ್ಷಕ್ಕೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಕೂಡ ಪೊಲೀಸರು ಹೇಳಿದ್ದಾರೆ.
