ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್, ತಮಗೆ ಮನೆಯಿಂದ ಊಟ ಸೇರಿದಂತೆ ಇನ್ನಿತರ ಸೌಕರ್ಯ ಬೇಕೆಂದು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.
ಮನೆಯಿಂದ ಊಟ, ಹಾಸಿಗೆ ಹಾಗೂ ಓದಲು ಪುಸ್ತಕ ಬೇಕೆಂದು ದರ್ಶನ್, ಹೈಕೋರ್ಟ್ ಗೆ ಜುಲೈ 19 ರಂದು ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಶುಕ್ರವಾರ ಅಂದರೆ ನಾಳೆಗೆ ವಿಚಾಣೆಯನ್ನು ಮುಂದೂಡಿದೆ.
ದರ್ಶನ್ ಊಟ, ಹಾಸಿಗೆ, ಪುಸ್ತಕ ಬೇಡಿಕೆಗೆ ತನಿಖಾಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ್ದರು. ಆದರೆ ಈ ರಿಟ್ ಅರ್ಜಿಗೆ ಸರ್ಕಾರ ಆಕ್ಷೇಪಣೆ ಸಲ್ಲಿಸಬಹುದು. ತನಿಖಾಧಿಕಾರಿಗಳು ಆಕ್ಷೇಪಣೆ ಸಲ್ಲಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ ನಾಳೆಗೆ ಸರ್ಕಾರದ ಪರ ವಕೀಲ ಕೆ.ಎನ್.ಫಣೀಂದ್ರ ಅವರಿಗೆ ವಾದ ಮಂಡಿಸಲು ಅವಕಾಶ ನೀಡಲಾಗಿದ್ದು, ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.
ಪರಪ್ಪರ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿ ಆಗಿರುವ ನಟ ದರ್ಶನ್ ಗೆ ಜೈಲಿನ ಊಟ ಒಗ್ಗುತ್ತಿಲ್ಲ. ಹೀಗಾಗಿ ಅತಿಸಾರ ಸೇರಿದಂತೆ ಹಲವು ಕಾಯಿಲೆಗಳು ಬಾಧಿಸುತ್ತಿವೆ. ಜೈಲಿನಲ್ಲಿ ಮಲಗಲು ಹಾಸಿಗೆ ವ್ಯವಸ್ಥೆ ಇಲ್ಲದ ಕಾರಣ ನಿದ್ರಾಹೀನತೆ ಹಾಗೂ ಬೆನ್ನು ನೋವು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೈ ನೋವು ಸಹ ಕಾಡಿತ್ತು. ಹೀಗಾಗಿ ದರ್ಶನ್, ತಮಗೆ ಮನೆಯಿಂದ ಊಟ, ಮಲಗಲು ಹಾಸಿಗೆ, ದಿಂಬು ಹಾಗೂ ಕೆಲವು ಪುಸ್ತಕಗಳನ್ನು ತರಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ಕೋರ್ಟ್ ನಾಳೆಗೆ ಮುಂದೂಡಿದೆ.
ಅಲ್ಲದೇ, ರೇಣುಕಾ ಸ್ವಾಮಿ ಕೊಲೆ ಪ್ರಕರಣದ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಕೊನೆಯಾಗಲಿದ್ದು, ಪೊಲೀಸರು ರಿಮ್ಯಾಂಡ್ ಅರ್ಜಿಯನ್ನು ಇಂದು ಸಲ್ಲಿಸಲಿದ್ದಾರೆ. ಇಂದು ಕೂಡ ಜಾಮೀನು ಸಿಗುವುದು ಡೌಟ್ ಎನ್ನಲಾಗುತ್ತಿದೆ.