20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಚಂದನವನದ (Sandalwood) ನಿರ್ದೇಶಕ ಗಜೇಂದ್ರ (Gajendra) ಅಲಿಯಾಸ್ ಗಜ ಎಂಬುವವರನ್ನು ಸಿಸಿಬಿ ಪೊಲೀಸರು ಕೊನೆಗೂ ಅರೆಸ್ಟ್ ಮಾಡಿದ್ದಾರೆ.
2004ರಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿ ರೌಡಿ ಶೀಟರ್ ಕೊತ್ತರವಿ ಹತ್ಯೆಯಾಗಿತ್ತು. ಇದೇ ಕೇಸ್ ನಲ್ಲಿ ಚಂದ್ರಪ್ಪ, ಅಲ್ಯೂಮಿನಿಯಂ ಬಾಬು ಜೊತೆಗೆ ನಿರ್ದೇಶಕ ಗಜೇಂದ್ರ 8ನೇ ಆರೋಪಿಯಾಗಿದ್ದ. ಗಜೇಂದ್ರ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿ, ನಂತರ ಜಾಮೀನಿನ ಮೇಲೆ ಹೊರ ಬಂದಿದ್ದ. ಆದರೆ, ಆನಂತರ ಕೋರ್ಟ್ ಗೆ ಹಾಜರಾಗದೆ ತಲೆ ಮರೆಸಿಕೊಂಡು ಓಡಾಡಿಕೊಂಡಿದ್ದ. ಈತನನ್ನು ಸಿಸಿಬಿ ಪೊಲೀಸರು 20 ವರ್ಷಗಳ ಬಳಿಕ ಬಂಧಿಸಿದ್ದಾರೆ.
ಜಾಮೀನು ಪಡೆದ ನಂತರ ಈತ ಜಾಮೀನಿನ ನಿಯಮಗಳನ್ನು ಪಾಲಿಸಿರಲಿಲ್ಲ. ಹಲವು ವರ್ಷಗಳಿಂದ ಕೋರ್ಟ್ ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. 20 ವರ್ಷಗಳಿಂದ ಪೊಲೀಸರ ಕೈಗೂ ಗಜೇಂದ್ರ ಸಿಕ್ಕಿರಲಿಲ್ಲ. ಹಿಂದೆ ‘ಪುಟಾಣಿ ಪವರ್’ ಹಾಗೂ ‘ರುದ್ರ’ ಎಂಬ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ. ಅಷ್ಟೇ ಅಲ್ಲದೇ ತಮಿಳಿನಲ್ಲಿ ಒಂದೆರಡು ಸಿನಿಮಾ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.