ಕನ್ನಡ ಚಿತ್ರರಂಗದ ಸಮಯ ಯಾಕೋ ಸರಿ ಇದ್ದಂತಿಲ್ಲ!. ಚಿತ್ರಮಂದಿರದ ಕಡೆ ಜನ ಬಾರದೇ, ಬಿಡುಗಡೆ ಕಂಡ ಸಿನಿಮಾಳೆಲ್ಲಾ ಮಕಾಡೆ ಮಲಗುತ್ತಿರುವ ಈ ಹೊತ್ತಲ್ಲಿ, ಸಂಬಂಧಿಸಿದವರ ಒಂದೊಂದೇ ವಿಷಯಗಳು ಬಿತ್ತರಗೊಳ್ಳುತ್ತಾ, ಚಿತ್ರರಂಗಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಅಸಲಿಗೆ ದರ್ಶನ್ ಪ್ರಕರಣ ಆದ ಮೇಲಂತೂ ಚಿತ್ರರಂಗದ ಮೇಲೆ ಕಾರ್ಮೋಡ ಕವಿದಂತೆ ಭಾಸವಾಗುತ್ತಿದೆ. ಇದೇ ಹೊತ್ತಲ್ಲಿ ನಟ ರಕ್ಷಿತ್ ಶೆಟ್ಟಿ ಹೊಸ ಕೇಸು ಮೈಮೇಲೆ ಎಳೆದುಕೊಂಡಿದ್ದಾರೆ. ಮಾತು-ಮಾತಲ್ಲೇ ಬಗೆ ಹರಿಯಬೇಕಿದ್ದ ವಿಷಯ, ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಹೌದು, ಕಳೆದ ಮಾರ್ಚ್ ತಿಂಗಳಲ್ಲಿ ತೆರೆಕಂಡು ಸದ್ದಿಲ್ಲದೇ ಸೈಡಿಗೆ ಸೇರಿಹೋಗಿದ್ದ “ಬ್ಯಾಚುಲರ್ ಪಾರ್ಟಿ” ಎಂಬ ಸಿನಿಮಾಗೆ ಸಂಬಂಧಿಸಿದ ಕೇಸ್ ಇದಾಗಿದ್ದು, ಸಿನಿಮಾದಲ್ಲಿ ನಮ್ಮ ಸಂಸ್ಥೆಗೆ ಸೇರಿದ ಹಾಡನ್ನು ಬಳಸಿಕೊಂಡು ಹಕ್ಕು ಸ್ವಾಮ್ಯತೆ ಪಡೆಯದೆಯೇ ಹಾಡು ಬಳಸಿ ಕೊಳ್ಳಲಾಗಿದೆ ಎಂದು ಆರೋಪಿಸಿ, “ಎಂಆರ್ ಟಿ” ಆಡಿಯೋ ಸಂಸ್ಥೆ, ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬ್ಯಾಚುಲರ್ ಪಾರ್ಟಿ ಚಿತ್ರ ನಿರ್ಮಿಸಿದ “ಪರಂವಾ ಸ್ಟುಡಿಯೋಸ್” ಮತ್ತು ಈ ನಿರ್ಮಾಣ ಸಂಸ್ಥೆಯ ಮಾಲೀಕ ರಕ್ಷಿತ್ ಶೆಟ್ಟಿ ಮೇಲೆ “ಕಾಪಿ ರೈಟ್ ಉಲ್ಲಂಘನೆ” ಮಾಡಿದ ಆರೋಪದಡಿ ಕೇಸು ದಾಖಲಿಸಲಾಗಿದೆ. ದಿಗಂತ್, ಯೋಗಿ, ಅಚ್ಯುತ್ ಕುಮಾರ್ ನಟಿಸಿದ್ದ “ಬ್ಯಾಚುಲರ್ ಪಾರ್ಟಿ” ಸಿನಿಮಾದಲ್ಲಿ ಎಂಆರ್ಟಿ (MRT) ಆಡಿಯೋ ಕಂಪೆನಿಗೆ ಸೇರಿದ್ದ “ಗಾಳಿಮಾತು” ಚಿತ್ರದ “ಒಮ್ಮೆ ನಿನ್ನನ್ನು ಕಣ್ತುಂಬ ನೋಡುವಾಸೆ ಎಲ್ಲಿರುವೆ?” ಎಂಬ ಹಾಡನ್ನು ಮತ್ತು “ನ್ಯಾಯ ಎಲ್ಲಿದೆ” ಚಿತ್ರದ “ಎಲ್ಲಿದೆಯೋ ನ್ಯಾಯ? ಅಣ್ಣಾ ಎಲ್ಲಿದೆಯೋ ನ್ಯಾಯ?” ಎಂಬ ಹಾಡುಗಳನ್ನು, ತಮ್ಮಿಂದ ಪ್ರಸಾರದ ಹಕ್ಕು ಪಡೆಯದೆಯೇ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಅಸಲಿಗೆ ಚಿತ್ರ ಬಿಡುಗಡೆಗೂ ಎರಡು ತಿಂಗಳ ಮೊದಲು ಮ್ಯುಸಿಕ್ ಕಂಪೆನಿಯ ಜೊತೆ ಪರಂವಾ ಸಂಸ್ಥೆ ಮಾತುಕತೆ ನಡೆಸಿತ್ತು. ಸರಿಯಾದ ರೀತಿಯಲ್ಲಿ ವ್ಯವಹಾರ ಕುದುರಿಸದೆಯೇ ಹಾಡು ಬಳಸಿಕೊಂಡು ಚಿತ್ರ ಬಿಡುಗಡೆ ಮಾಡಿತ್ತು. ನಂತರದಲ್ಲಿ ಚಿತ್ರ ಸೋತು ಆ ಸಿನಿಮಾ ಗೋಜಿಗೆ ಪರಂವಾ ತಲೆಹಾಖಯಕಿರಲಿಲ್ಲ ಎನ್ನಲಾಗಿದೆ. ನಂತರದಲ್ಲಿ ಸಿನಿಮಾ ಬಿಡುಗಡೆಗೂ ಹಿಂದಿನ ಮಾತುಕತೆಯಂತೆ, ಆಡಿಯೋ ಕಂಪೆನಿಯ ಜೊತೆ ವ್ಯವಹಾರ ಮುಗಿಸದೇ, ಕಾಲಹರಣ ಮಾಡಿದ ಪರಿಣಾಮ ವಿಷಯವೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಈ ಹಿಂದೆಯೂ ರಕ್ಷಿತ್ ಶೆಟ್ಟಿಯ ಮೇಲೆ “ಕಿರಿಕ್ ಪಾರ್ಟಿ” ಚಿತ್ರದಲ್ಲಿ ಹಕ್ಕು ಪಡೆಯದೆಯೇ ಹಾಡು ಬಳಸಿಕೊಂಡ ಆರೋಪದಡಿ “ಲಹರಿ” ಆಡಿಯೋ ಕಂಪೆನಿ ದೂರು ದಾಖಲಿಸಿ ಹೋರಾಟಕೊಟ್ಟಿತ್ತು. ವಿಷಯ ಕೋರ್ಟ್ ವರೆಗೂ ಹೋಗಿ ಬಂದು ಒಪ್ಪಂದದೊಂದಿಗೆ ಸರಿಹೋಗಿತ್ತು. ಇದೀಗ ಅದೇ ಲಹರಿ ಸಂಸ್ಥೆಗೆ ಸಂಬಂಧಿಸಿದ “ಎಂಆರ್ ಟಿ” ಆಡಿಯೋ ಕಂಪೆನಿ ದೂರು ನೀಡಿದೆ. ವಿಷಯ ಇನ್ನಷ್ಟು ಗಂಭೀರತೆ ಪಡೆಯುವ ಸಾಧ್ಯತೆ ಇದ್ದು, ಪ್ರತಿಷ್ಠೆಗೆ ನಿಂತರೇ ಮತ್ತೆ ಕೋರ್ಟ್ ಮೆಟ್ಟಿಲೇರೋದರಲ್ಲಿ ಅನುಮಾನವಿಲ್ಲ. ಸದ್ಯ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರಿಗೆ ಸಂಬಂಧಿಸಿದಂತೆ ತನಿಖೆಯಾಗಲಿದ್ದು, ಠಾಣಾಧಿಕಾರಿ “ಅಜಯ್ ಸಾರಥಿ” ತಂಡದವರಿಂದ ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ರಕ್ಷಿತ್ ಶೆಟ್ಟಿಗೆ ಕರೆಹೋಗಿದೆ. ಸದ್ಯದಲ್ಲೇ ವಿಚಾರಣೆ ನಡೆಯಲಿದೆ.
