ನವದೆಹಲಿ: ದೇಶದ ಪ್ರಧಾನಿ ನರೇಂದ್ರ ಮೋದಿ (Narendra Modi) ಜನಪ್ರಿಯತೆಗೆ ಮತ್ತೊಂದು ಗರಿ ಸಿಕ್ಕಂತಾಗಿದೆ.
ಪ್ರಧಾನಿ ಮೋದಿ ಬಳಕೆ ಮಾಡುತ್ತಿರುವ ಸಾಮಾಜಿಕ ಜಾಲತಾಣ ಎಕ್ಸ್ ನ್ನು (ಟ್ವಿಟ್ಟರ್) 100 ಮಿಲಿಯನ್ (10 ಕೋಟಿ) ಜನರು ಫಾಲೋ ಮಾಡುತ್ತಿದ್ದಾರೆ. ಈ ಮೂಲಕ ಇದು ಪ್ರಧಾನಿ ಅವರ ಜನಪ್ರಿಯತೆಗೆ ಸಿಕ್ಕ ಗರಿಯಾಗಿದೆ.
ಎಕ್ಸ್ ನಲ್ಲಿ (X) ಭಾನುವಾರ ಮೋದಿ ಫಾಲೋವರ್ಸ್ ಸಂಖ್ಯೆ 100 ಮಿಲಿಯನ್ ಗಡಿ ದಾಟಿದೆ. ಈ ಮೂಲಕ ಸದ್ಯ ದೇಶವನ್ನು ಮುನ್ನಡೆಸುವ ಜಗತ್ತಿನ ನಾಯಕರ ಪಟ್ಟಿಯಲ್ಲಿ ಎಕ್ಸ್‌ನಲ್ಲಿ ಅತಿ ಹೆಚ್ಚು ಫಾಲೋರ್ವಸ್ ಹೊಂದಿರುವ ನಾಯಕ ಎಂಬ ದಾಖಲೆ, ಹೆಗ್ಗಳಿಕೆ, ಪ್ರಶಂಸೆಗಳಿಗೆ ಭಾರತದ ಪ್ರಧಾನಿ ಸಾಕ್ಷಿಯಾಗಿದ್ದಾರೆ.
ಅಧಿಕಾರದಲ್ಲಿರುವ ನಾಯಕರ ಪೈಕಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ 3.81 ಕೋಟಿ, ಟರ್ಕಿಯ ಅಧ್ಯಕ್ಷ ಎರ್ಡೊಗನ್ 2.15 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮೋದಿ ಈ ಕುರಿತು ಹೇಳಿದ್ದಾರೆ.
ಚರ್ಚೆ, ಒಳನೋಟಗಳು, ಜನರ ಆಶೀರ್ವಾದ, ರಚನಾತ್ಮಕ ಟೀಕೆಗಳನ್ನು ಈ ರೋಮಾಂಚಕ ಮಾಧ್ಯಮದಲ್ಲಿ ನೋಡಲು ಸಂತೋಷವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಮೋದಿ ಗುಜರಾತ್ ಸಿಎಂ ಆಗಿದ್ದಾಗಲೇ ಟ್ವಿಟ್ಟರ್‌ನಲ್ಲಿ ಖಾತೆ ತೆರೆದಿದ್ದು 15 ವರ್ಷಗಳಿಂದ ಈ ಸಾಮಾಜಿಕ ಜಾಲತಾಣ ಬಳಕೆ ಮಾಡುತ್ತಿದ್ದಾರೆ. ಜನವರಿ 2009ರಲ್ಲಿಯೇ ಅವರು ಟ್ವಿಟ್ಟರ್ ಖಾತೆ ಸೇರಿದ್ದಾರೆ. ಮೋದಿ ಇಲ್ಲಿಯವರೆಗೆ 2,671 ಜನರನ್ನು ಫಾಲೋ ಮಾಡುತ್ತಿದ್ದಾರೆ.
ಎಕ್ಸ್ ನಲ್ಲಿ ಎಕ್ಸ್ ಮಾಲೀಕ ಎಲೋನ್ ಮಸ್ಕ್ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ. ಮಸ್ಕ್ ಗೆ 18.96 ಕೋಟಿ ಫಾಲೋವರ್ಸ್ ಇದ್ದರೆ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ 13.17 ಕೋಟಿ, ಸಂಗೀತಗಾರ ಜಸ್ಟಿನ್ ಬೈಬರ್ ಅವರಿಗೆ 11.10 ಕೋಟಿ ಫಾಲೋವರ್ಸ್ ಗಳಿದ್ದಾರೆ. ಇನ್ನುಳಿದಂತೆ ದೇಶದಲ್ಲಿನ ಇನ್ನಿತರ ನಾಯಕರನ್ನು ನೋಡುವುದಾದರೆ, ಅರವಿಂದ್ ಕೇಜ್ರಿವಾಲ್ ಅವರನ್ನು2.75 ಕೋಟಿ ಮಂದಿ ಫಾಲೋ ಮಾಡುತ್ತಿದ್ದರೆ ರಾಹುಲ್ ಗಾಂಧಿ ಅವರನ್ನು 2.64 ಕೋಟಿ ಜನ ಫಾಲೋ ಮಾಡುತ್ತಿದ್ದಾರೆ.