ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಆರೋಪ ಕೇಳಿ ಬಂದಿದ್ದು, ಬಿಜೆಪಿ ಪ್ರತಿಭಟನೆ ನಡೆಸಿದೆ. ಈ ವೇಳೆ ಪೊಲೀಸರು ಅಡ್ಡಿ ಪಡಿಸಿದ್ದಕ್ಕೆ ಪೊಲೀಸರ ಕಣ್ತಪ್ಪಿಸಿ ಮೈಸೂರಿಗೆ ಎಂಟ್ರಿ ಕೊಡುವಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮತ್ತು ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಯಶಸ್ವಿಯಾಗಿದ್ದಾರೆ.
ಆದರೂ ಮೈಸೂರಿನಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು. ಬೆಂಗಳೂರಿನ ನ್ಯಾಯಂಡಹಳ್ಳಿಯಿಂದ ಮೈಸೂರಿಗೆ ರಸ್ತೆ ಮಾರ್ಗದಲ್ಲಿ ಹೊರಟ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಿದ್ದರು. ಕೆಲವು ನಾಯಕರನ್ನು ಅವರ ನಿವಾಸದಿಂದಲೇ ವಶಕ್ಕೆ ಪಡೆಯಲಾಗಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ಮೈಸೂರು ಹೈವೇಯಲ್ಲಿಯೇ ವಶಕ್ಕೆ ಪಡೆದಿದ್ದರು. ಆರ್. ಅಶೋಕ ಮಾತ್ರ ಗೂಡ್ಸ್ ಟೆಂಪೋದಲ್ಲಿ ಕುಳಿತುಕೊಂಡು ಪೊಲೀಸರ ಕಣ್ತಪ್ಪಿಸಿ ಮೈಸೂರಿಗೆ ತಲುಪಿದ್ದರು. ಅಶೋಕ್‌ಗೆ ಮಾಜಿ ಡಿಸಿಎಂ ಡಾ. ಸಿ ಎನ್ ಅಶ್ವತ್ಥನಾರಾಯಣ ಸಾಥ್ ನೀಡಿದ್ದರು. ಆನಂತರ ಮೈಸೂರಿನ ಪ್ರತಿಭಟನೆ ಸ್ಥಳಕ್ಕೆ ಗೂಡ್ಸ್ ಟೆಂಪೊದಲ್ಲಿ ತೆರಳಿ ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದುರು.

ಈ ವೇಳೆ ಆರ್. ಅಶೋಕ್, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು ಬಿಜೆಪಿ ನಾಯಕರು ಮೈಸೂರಿಗೆ ಹೊರಟಿದ್ದರೆ, ಪೊಲೀಸರನ್ನು ಬಳಸಿಕೊಂಡು ನಮ್ಮನ್ನ ಮಾರ್ಗ ಮಧ್ಯದಲ್ಲೇ ತಡೆಯುವ ಮೂಲಕ ಸರ್ವಾಧಿಕಾರಿ ಧೋರಣೆ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಗೂಡ್ಸ್ ವಾಹನದಲ್ಲಿ ಬೆಂಗಳೂರಿಂದ ಮೈಸೂರಿಗೆ ಬಂದಿದ್ದೇನೆ. ನಮ್ಮ ಪ್ರತಿಭಟನೆಯನ್ನ ಹತ್ತಿಕ್ಕುವ ಕೆಲಸವನ್ನ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಮುಡಾದಲ್ಲಿ ಎರೆಡು ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.
