ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ತಮ್ಮ ಪಾಲಿನ ಅರವತ್ತೆರಡರ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಿನಿ ವೃತ್ತಿ ಜೀವನದ ಆರಂಭದ 1986 ರಲ್ಲಿ ಆನಂದ್, ರಥ ಸಪ್ತಮಿ ಹಾಗೂ 1987ರಲ್ಲಿ ಮನಮೆಚ್ಚಿದ ಹುಡುಗಿ ಸಿನಿಮಾಗಳು ಸತತ ಶತದಿನೋತ್ಸವ ಆಚರಿಸುವ ಮೂಲಕ ಹ್ಯಾಟ್ರಿಕ್ ಹೀರೋ ಬಿರುದು ಮೂಡಿಗೇರಿಸಿಕೊಂಡಿದ್ದ ನಟ ಶಿವಣ್ಣ, ಚಿತ್ರರಂಗದಲ್ಲಿ ಪಾತ್ರಗಳ ಮೂಲಕ ಅತಿಹೆಚ್ಚು ಪ್ರಯೋಗಕ್ಕೆ ಒಡ್ಡಿಕೊಂಡು ಯಶಸ್ವಿಯಾದ ನಟರು. ಇಂದು ಇವರ 62ನೇ ಜನ್ಮದಿನಾಚರಣೆ. ಈ ಬಾರಿಯ ಆಚರಣೆಗೆ “ಭೈರತಿ ರಣಗಲ್” ಚಿತ್ರತಂಡ ಭರ್ಜರಿ ಟೀಸರ್(first verdict) ಬಿಡುಗಡೆ ಕಾಣಿಸಿ, ಅಭಿಮಾನಿಗಳಿಗೆ ಮನರಂಜನೆಯ ಉಡುಗೊರೆ ನೀಡಿದೆ.

ಹೌದು, ಇಂದು ಬಿಡುಗಡೆ ಕಂಡಿರುವ ಭೈರತಿ ರಣಗಲ್ ಚಿತ್ರದ ವಿಡಿಯೋ ತುಣುಕು ಸಖತ್ ಸೌಂಡು ಮಾಡುತ್ತಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಅದರಲ್ಲಿ ಬರುವ “ನಾನ್ ತಾಳ್ಮೆ ಕಳ್ಕೊಂಡಾಗ್ಲೆಲ್ಲಾ, ತುಂಬಾ ಜನ ತಲೆಗಳ್ ಕಳ್ಕೊಂಡಿದಾರೆ..” ಎಂಬ ಶಿವಣ್ಣನ ಖದರ್ ಡೈಲಾಗ್ ಅಭಿಮಾನಿಗಳನ್ನ ಹುಚ್ಚೆಬ್ಬಿಸಿದೆ. ಡೈಲಾಗಿಗೆ ಪೂರಕವಾದ ಬೆಂಕಿಯಂಥ ಬಿಜಿಎಂ ಕೊಟ್ಟ “ರವಿ ಬಸ್ರೂರು ಸ್ಕೋರು” ಮಾಡಿದ್ದಾರೆ. ದೃಶ್ಯ ಸರೆಹಿಡಿದ ನವೀನ್ ಕುಮಾರ್ ಛಾಯಾಗ್ರಹಣದಲ್ಲಿ ಪ್ರತಿ ಶಾಟ್ ಗಳೂ ಸಹ ವಿಜೃಂಭಿಸುತ್ತಿದ್ದು, “ನಿರ್ದೇಶಕ ನರ್ತನ್” ಕುಸುರಿಯ ತಯಾರಿ ಎದ್ದು ಕಾಣುತ್ತಿದೆ. ಈಗಿನ ಟ್ರೆಂಡಿಗೆ ಬೇಕಾದದ್ದನ್ನೇ ಭರ್ಜರಿಯಾಗಿ ಕಟ್ಟಿಕೊಟ್ಟಂತಿದೆ.

ಗೀತಾ ಶಿವರಾಜ್ ಕುಮಾರ್ ನಿರ್ಮಾಣದಲ್ಲಿ ಅದ್ಧೂರಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಸಿನಿಮಾ, ಸೆಪ್ಟೆಂಬರ್ನಲ್ಲಿ ಬಿಡುಗಡೆ ಕಾಣಲು ದಿನಾಂಕ ನಿಗದಿಪಡಿಸಿಕೊಂಡಿದೆ. ಮಪ್ತಿ ಚಿತ್ರದಲ್ಲಿ ಶಿವಣ್ಣನ ಪಾತ್ರದ ಹೆಸರು ‘ಭೈರತಿ ರಣಗಲ್’ ಆಗಿತ್ತು. ಆ ಚಿತ್ರ, ಪಾತ್ರ ಎಲ್ಲವೂ ಸದ್ದು ಮಾಡಿದ್ದ ಪರಿಣಾಮ, ಅದೇ ಹೆಸರಲ್ಲಿ ಈ ಚಿತ್ರ ತಯಾರಾಗಿದೆ. ಅಸಲಿಗೆ “ಸೆಪ್ಟೆಂಬರಲ್ಲಿ ಶಿವಣ್ಣನ ಅಭಿಮಾನಿಗಳಿಗೆ ಹಬ್ಬ ಇರೋದು ಫಿಕ್ಸ್” ಎಂಬಂತಿದೆ ಚಿತ್ರದ ಸದ್ಯದ ಸದ್ದು. ಕಾದುನೋಡಿ.
