ಬೆಂಗಳೂರು: ಕ್ಯಾನ್ಸರ್ ಕಾಯಿಲೆಯೊಂದಿಗೆ ಹೋರಾಡುತ್ತಿದ್ದ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ (Kannada Anchor Aparna) ಇಹಲೋಕ ತ್ಯಜಿಸಿದ್ದಾರೆ.
ಬಹಳ ದಿನಗಳಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾ ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರು ದೂರದರ್ಶನದಲ್ಲಿ ಸೀನಿಯರ್ ಗ್ರೇಡ್ ನಿರೂಪಕಿಯಾಗಿದ್ದ ಅಪರ್ಣಾ, ಆಕಾಶವಾಣಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದರು. ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಅಭಿನಯಿಸಿದ್ದರು.
ಕನ್ನಡದ ಯಶಸ್ವಿ ನಿರೂಪಕಿಯಾಗಿ 3 ದಶಕಗಳನ್ನು ಪೂರೈಸಿದ್ದರು. ಕಿರುತೆರೆಯಲ್ಲಿ ʻಮೂಡಲಮನೆʼ, ʻಮುಕ್ತʼ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಕೂಡ ಅಪರ್ಣಾ ಅಭಿನಯಿಸಿದ್ದರು. 2013 ರಲ್ಲಿ ಬಿಗ್‌ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದರು. 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿ ಮನಗೆದ್ದಿದ್ದರು. 2014 ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಘೋಷಣೆಯಾಗುವ
ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಸೂಚನೆʼಗೆ ಧ್ವನಿ ಗೂಡಿಸಿದ್ದರು. ಹೀಗೆ ಹತ್ತು ಹಲವೆಡೆ ಕನ್ನಡಿಗರು ಅಪರ್ಣಾ ಧ್ವನಿ ಮೆಚ್ಚಿಕೊಂಡಿದ್ದರು. ಇಂತಹ ಮಹಾನ್ ಪ್ರತಿಭೆ ಇಷ್ಟು ಬೇಗ ಅಗಲಿದ್ದು, ಕನ್ನಡಾಭಿಮಾನಿಗಳಲ್ಲಿ ಅತೀವ ಬೇಸರ ತರಿಸಿದೆ.