ಅಮರಾವತಿ: 8 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ 13 ವರ್ಷದ ಮೂವರು ಅಪ್ರಾಪ್ತರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಆಂಧ್ರಪ್ರದೇಶದ (Andhra Pradesh) ನಂದ್ಯಾಲ ಜಿಲ್ಲೆಯ ಮುಚ್ಚುಮರ್ರಿ ಎಂಬಲ್ಲಿ ನಡೆದಿದೆ. ಅತ್ಯಾಚಾರ ನಡೆಸಿ, ನಂತರ ಬಾಲಕಿಯನ್ನು ಕೊಲೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಆರೋಪಿಗಳನ್ನು ಪೊಲೀಸರು (Muchumarri police) ಬಂಧಿಸಿದ್ದು, ವಿಚಾರಣೆ ವೇಳೆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಬಾಲಕಿಯ ಶವವನ್ನು ಕಾಲುವೆಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಬಾಲಕಿಯ ಶವ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಬಾಲಕಿ ಭಾನುವಾರ ಮುಚ್ಚುಮರ್ರಿ ಪಾರ್ಕ್‍ನಲ್ಲಿ ಆಟವಾಡುತ್ತಿದ್ದಳು. ಆನಂತರ ಬಾಲಕಿ ನಾಪತ್ತೆಯಾಗಿದ್ದಳು. ಹೀಗಾಗಿ ಬಾಲಕಿಯ ಪೋಷಕರು ದೂರು ದಾಖಲಿಸಿದ್ದರು. ಈ ಪ್ರಕರಣ ಬೇಧಿಸಲು ಶ್ವಾನದಳ ಬಳಕೆ ಮಾಡಿಕೊಂಡಾಗ ಅದು ಮೂವರು ಅಪ್ರಾಪ್ತರ ಬಳಿ ಶ್ವಾನ ಕರೆದೊಯ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ವಿಚಾರಣೆ ನಡೆಸಿದಾಗ ಈ ಕೃತ್ಯ ಬಯಲಿಗೆ ಬಂದಿದೆ. ಸದ್ಯ ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.