..ಬೈಂದೂರು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿರುವ ಪರಿಣಾಮವಾಗಿ, ಹಲವೆಡೆ ಅಪಾರ ಹಾನಿ ಸಂಭವಿಸಿದೆ. ನದಿ ತೀರದ ಕೆಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಕೃಷಿಗೆ ಹಾನಿಯಾಗಿದೆ. ತಾಲ್ಲೂಕಿನಾದ್ಯಂತ ಹಲವೆಡೆ ಜನಜೀವನ ಅಸ್ತವ್ಯಸ್ಥವಾಗಿದೆ. ಜಾನುವಾರುಗಳ ಪರಿಸ್ಥಿತಿಯು ಅಯೋಮಯವಾಗಿದೆ. ಸದ್ಯ ಈ ಪ್ರವಾಹ ಪೀಡಿತ ಪ್ರದೇಶಗಳಿಗೆ, ಶಾಸಕ ಗುರುರಾಜ್ ಗಂಟಿಹೊಳೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ 5-6 ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸೌಪರ್ಣಿಕಾ ನದಿ ನೀರಿನ ಮಟ್ಟ ಹೆಚ್ಚಾಗಿದೆ. ನದಿಯ ಅಕ್ಕ ಪಕ್ಕದ ತಗ್ಗು ಪ್ರದೇಶಗಳಾದ ನಾವುಂದ, ಅರೆಹೊಳೆ, ಸಾಲ್ಬುಡ, ಬಡಾಕೆರೆ, ನಾಡ, ಕಡ್ಕೆ, ಮರವಂತೆ, ಪಡುಕೋಣೆ, ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕರು, ನೆರೆಯಿಂದ ಆಗುವ ಸಮಸ್ಯೆಗಳ ಬಗ್ಗೆ ಸ್ಥಳೀಯರು ಹಾಗೂ ಪಂಚಾಯತ್ ಪ್ರತಿನಿಧಿಗಳೊಂದಿಗೆ ಕೂಲಂಕುಶವಾಗಿ ಚರ್ಚಿಸಿದರು. ಜಾನುವಾರುಗಳಿಗೆ ಮಳೆಗಾಲದ ಸಂದರ್ಭದಲ್ಲಿ ಗೋಮಾಳ ಜಾಗದಲ್ಲಿ ಶಾಶ್ವತ ಕೊಟ್ಟಿಗೆ ನಿರ್ಮಾಣ ಹಾಗೂ ಗದ್ದೆ ಪ್ರದೇಶದಲ್ಲಿರುವ ತೋಡು(ಕಾಲುವೆ)ಗಳ ಹೂಳೆತ್ತುವ ಕಾರ್ಯ. ಹಾಗೂ ನದಿ ದಂಡೆ ನಿರ್ಮಾಣಕ್ಕೆ ವಿಶೇಷ ಅನುದಾನ ವ್ಯವಸ್ಥೆ ಮಾಡುವ ಬಗ್ಗೆ ಚರ್ಚಿಸಿದರು.
