ಬೆಂಗಳೂರು: ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಮತ್ತೊಂದು ಮಿನಿ ಉಪ ಸಮರಕ್ಕೆ ರಣಕಣ ಸಿದ್ಧವಾಗುತ್ತಿದೆ. ಉಪಚುನಾವಣೆ ಘೋಷಣೆಗೂ ಮುನ್ನವೇ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ತಂತ್ರ- ಪ್ರತಿತಂತ್ರ ಬಲು ಜೋರು ಪಡೆದಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಸ್ಪರ್ಧೆ ಮಾಡುತ್ತದೆಯೋ ಅಥವಾ ಜೆಡಿಎಸ್ ಸ್ಪರ್ಧೆ ಮಾಡುತ್ತದೆಯೋ ಎಂಬ ಕುತೂಹಲ ಚನ್ನಪಟ್ಟಣ ಬಿಜೆಪಿ ಜೆಡಿಎಸ್ ಹಾಗೂ ಕಾರ್ಯಕರ್ತರಲ್ಲಿ ಮನೆ ಮಾಡಿದೆ. ಈಗ ಚನ್ನಪಟ್ಟಣ ಉಪ ಸಮರದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಆದಂತಾಗುತ್ತದೆ.
ಬೊಂಬೆ ನಾಡಿನಲ್ಲಿ ಈಗ ರಾಜಕೀಯ ಆಟ ಜೋರು ಪಡೆದಿದೆ. ಜೆಡಿಎಸ್ ಸ್ಪರ್ಧೆ ಬಹುತೇಕ ಖಚಿತವಾಗಿದ್ದು, ಅದಕ್ಕೆ ಪುಷ್ಟಿ ಕೊಡುವಂತೆ ಸೋಮವಾರ ಕೇಂದ್ರ ಸಚಿವ ಕುಮಾರಸ್ವಾಮಿ ಚನ್ನಪಟ್ಟಣ ಜಿಲ್ಲೆಯ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಚುನಾವಣೆ ಸ್ಪರ್ಧೆ ಹಾಗೂ ಅಭ್ಯರ್ಥಿ ಆಯ್ಕೆ ಬಗ್ಗೆ ಮುಕ್ತವಾಗಿ ಕುಮಾರಸ್ವಾಮಿ ಕಾರ್ಯಕರ್ತರು ಜೊತೆ ಸಮಾಲೋಚನೆ ನಡೆಸಿ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡುವ ಸುಳಿವು ನೀಡಿದ್ದಾರೆ. ಇದೇ ಸಮಯದಲ್ಲಿ ಕಾರ್ಯಕರ್ತರು ಕೂಡ ಚನ್ನಪಟ್ಟಣದಿಂದ ನಿಖಿಲ್ ಸ್ಪರ್ಧೆ ಮಾಡುವಂತೆ ಕುಮಾರಸ್ವಾಮಿಗೆ ಒತ್ತಡ ಹಾಕಿದ್ದಾರೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ ಮಾಡುವುದಿಲ್ಲ. ಬದಲಾಗಿ ಎನ್ ಡಿಎ ಅಭ್ಯರ್ಥಿ ಗೆಲ್ಲಬೇಕು. ಆ ನಿಟ್ಟಿನಲ್ಲಿ ನಿಖಿಲ್ ಕೆಲಸ ಮಾಡುತ್ತಾರೆ ಎಂಬ ಸಂದೇಶವನ್ನು ಕುಮಾರಸ್ವಾಮಿ ಕಾರ್ಯಕರ್ತರಿಗೆ ನೀಡಿದ್ದಾರೆ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿರುವ ಮಾಜಿ ಸಚಿವ ಸಿಪಿ ಯೋಗೇಶ್ವರ್, ಕುಮಾರಸ್ವಾಮಿ ಗ್ರೀನ್ ಸಿಗ್ನಲ್ ಕಾಯುತಿದ್ದೇನೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಕುಮಾರಸ್ವಾಮಿ ಕೂಡ ನಿನ್ನೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಿಪಿ ಯೋಗೇಶ್ವರ್ ಅಥವಾ ಯಾರೇ ಅಭ್ಯರ್ಥಿಯಾದರು ಒಮ್ಮತದಿಂದ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಮುಖಂಡರು ಕೆಲಸ ಮಾಡಬೇಕು ಎಂಬ ಸೂಚನೆ ನೀಡಿದ್ದಾರೆ.
ಕುಮಾರಸ್ವಾಮಿ ಮಾತಿಗೆ ಒಪ್ಪದ ಕಾರ್ಯಕರ್ತರು ಸಿಪಿ ಯೋಗೇಶ್ವರ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೆ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧೆ ಮಾಡಲಿ ಎಂದಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿಯಿಂದ ಸ್ಪರ್ಧೆ ಮಾಡಿದರೆ ಗೆಲುವು ಕಷ್ಟ ಸಾಧ್ಯವಾಗುತ್ತದೆ. ಇದರಿಂದ ಕಾಂಗ್ರೆಸ್ ಗೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮುಖಂಡರು ಮತ್ತು ಕಾರ್ಯಕರ್ತರು ಒಂದು ಬಾರಿ ಸಿಪಿ ಯೋಗೇಶ್ವರ್ ಭೇಟಿ ಮಾಡಿ ಮಾತುಕತೆ ನಡೆಸುವಂತೆ ಕುಮಾರಸ್ವಾಮಿ ಸೂಚನೆ ಕೂಡ ನೀಡಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಕರ್ಮಭೂಮಿ ಚನ್ನಪಟ್ಟಣದಿಂದ ಜೆಡಿಎಸ್ ಅಭ್ಯರ್ಥಿ ಮತ್ತೊಮ್ಮೆ ಕಣಕ್ಕಿಳಿಯುವುದು ಬಹುತೇಕ ಫಿಕ್ಸ್ ಆದಂತಾಗಿದೆ. ಯೋಗೀಶ್ವರ್ ಸ್ಪರ್ಧ ಮಾಡಿದರೆ, ಡಿಕೆಶಿಗೂ ಕಷ್ಟವಾಗುತ್ತದೆ.
ಹೀಗಾಗಿ ಮೈತ್ರಿ ಅಭ್ಯರ್ಥಿಯಾಗಿ ಯೋಗೀಶ್ವರ್ ಸ್ಪರ್ಧೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ಶೀಘ್ರದಲ್ಲೇ ಕುಮಾರಸ್ವಾಮಿ ಬಿಜೆಪಿ ಬಲಿಷ್ಠರನ್ನ ಭೇಟಿ ಮಾಡಿ ಅಭ್ಯರ್ಥಿಯ ಹೆಸರು ಫೈನಲ್ ಮಾಡಲಿದ್ದಾರೆ. ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ನಿಂದ ಸಿಪಿ ಯೋಗೇಶ್ವರ್ ಕಣಕ್ಕಿಳಿಯುತ್ತಾರೆಯೇ ಅಥವಾ ದಳಪತಿಗಳು ಹೊಸ ಮುಖಕ್ಕೆ ಮಣೆ ಹಾಕುತ್ತಾರೆಯೇ ಎಂಬುವುದು ಕೂಡ ಕಾಯ್ದು ನೋಡಬೇಕಿದೆ.