ಕರ್ನಾಟಕದಲ್ಲಿ ಡೆಂಗ್ಯೂ ಆತಂಕ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಡೆಂಗ್ಯೂ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆಯೂ ವರದಿಯಾಗುತ್ತಲೇ ಇವೆ. ಹೀಗಾಗಿ ಜನರಲ್ಲಿ ಆತಂಕ ಮನೆ ಮಾಡುತ್ತಿದೆ.
ಅಲ್ಲದೇ, ಕಳೆದ ವರ್ಷಕ್ಕೆ ಹೋಲಿಸಿದರೆ ಡೆಂಗ್ಯೂ ಮೂರು ಪಟ್ಟು ಹೆಚ್ಚುವರದಿಯಾಗಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ 53,866 ಜರನ್ನು ಡೆಂಗ್ಯೂ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ ಬರೋಬ್ಬರಿ 7006 ಜನರಲ್ಲಿ ರೋಗ ದೃಢಪಟ್ಟಿದೆ. 352 ಸಕ್ರಿಯ ಪ್ರಕರಣಗಳಿದ್ದು, 6 ಜನ ಈಗಾಗಲೇ ಡೆಂಗ್ಯೂಗೆ ಬಲಿಯಾಗಿದ್ದಾರೆ. ಜುಲೈ 6ರಂದು ಶನಿವಾರ 753 ಜನರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 175 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಂದು ವರ್ಷದೊಳಗಿನ ಮಗು, 1 ರಿಂದ 18 ವರ್ಷದ 53 ಮಕ್ಕಳು, 18 ವರ್ಷ ಮೇಲ್ಪಟ್ಟ 121 ಜನರಲ್ಲಿ ಡೆಂಗ್ಯೂ ಜ್ವರ ಇರುವುದು ಪತ್ತೆಯಾಗಿರುವುದು ತೀವ್ರ ಭಯಕ್ಕೆ ಕಾರಣವಾಗುತ್ತಿದೆ. ಈ ಪೈಕಿ ಹಾಸನದಲ್ಲಿ 2, ಬೆಂಗಳೂರು, ಶಿವಮೊಗ್ಗ, ಧಾರವಾಡ, ಹಾವೇರಿಯಲ್ಲಿತಲಾ ಒಬ್ಬರು ಡೆಂಗ್ಯೂಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.

ಆದರೆ, ಹಿಂದಿನ ವರ್ಷ ಇದೇ ಸಮಯದಲ್ಲಿ ರಾಜ್ಯದಲ್ಲಿ 2432 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದವು. ಆದರೆ, ಆ ವೇಳೆ ಯಾವುದೇ ಸಾವು -ನೋವು ಸಂಭವಿಸಿರಲಿಲ್ಲ. ಆದರೆ, ಈ ಬಾರಿ ಪ್ರಕರಣಗಳ ಸಂಖ್ಯೆ 7 ಸಾವಿರ ಗಡಿದಾಟಿವೆ. ಈ ಮೂಲಕ ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ರಾಜ್ಯದ 10 ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಆ ಜಿಲ್ಲೆಗಳಲ್ಲಿ ಆತಂಕ ಮನೆ ಮಾಡುತ್ತಿದೆ. ಹೆಚ್ಚು ಪೀಡಿತ ಜಿಲ್ಲೆಗಳನ್ನು ನೋಡುವುದಾದರೆ, ಬೆಂಗಳೂರು – 1908, ಚಿಕ್ಕಮಗಳೂರು – 521, ಮೈಸೂರು – 496, ಹಾವೇರಿ – 481, ಶಿವಮೊಗ್ಗ – 292, ಧಾರವಾಡ – 289, ಚಿತ್ರದುರ್ಗ – 275, ದಕ್ಷಿಣ ಕನ್ನಡ – 263, ಹಾಸನ – 221, ಮಂಡ್ಯ – 215 ಪ್ರಕರಣಗಳು ದಾಖಲಾಗಿವೆ.

ಆದರೆ, ಕಳೆದ ಒಂದು ವಾರದಿಂದ ರಾಜ್ಯದ ಬೆಂಗಳೂರು, ಬೆಳಗಾವಿ, ವಿಜಯಪುರ, ಗದಗ, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಮಂಡ್ಯ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಸಾಗುತ್ತಿವೆ. ಹಳೆಯ ಟಯರ್ ಗಳು, ತೆಂಗಿನ ಚಿಪ್ಪು, ಘನ ತ್ಯಾಜ್ಯಗಳಾದ ಪ್ಲಾಸ್ಟಿಕ್ ಬಾಟಲ್, ಒಡೆದು ಹೋದ ಮಡಿಕೆ ಸೇರಿದಂತೆ ನೀರು ನಿಲ್ಲುವ ಎಲ್ಲ ವಸ್ತುಗಳನ್ನು ವಿಲೇವಾರಿ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ. ಹೂವಿನ ಕುಂಡ, ಪ್ಲಾಸ್ಟಿಕ್ ಕವರ್‌ನಂತಹ ವಸ್ತುಗಳಲ್ಲಿ ಹೆಚ್ಚು ದಿನಗಳ ಕಾಲ ನೀರು ನಿಲ್ಲುವುದರಿಂದ ಸೊಳ್ಳೆಗಳ ಸಂತಾನ ವೃದ್ಧಿಯಾಗದಂತೆ ನೋಡಿಕೊಳ್ಳಬೇಕು. ಶನಿವಾರ ಬೆಂಗಳೂರಿನಲ್ಲಿ ಡೆಂಗ್ಯೂಗೆ ಬಾಲಕ ಬಲಿಯಾಗಿದ್ದರೆ, ಭಾನುವಾರ ಗದಗ ಜಿಲ್ಲೆಯಲ್ಲಿ 5 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಪ್ರತಿ ದಿನ ಯಾವುದಾದರೊಂದು ಜಿಲ್ಲೆಯಲ್ಲಿ ಸಾವಿನ ಪ್ರಕರಣ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಭಯಭೀತರಾಗಿದ್ದಾರೆ. ಹೀಗಾಗಿ ಜನರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಹೇಳುತ್ತಿದ್ದಾರೆ.
