ಬೆಂಗಳೂರು: ಲೋಕಸಭಾ ಚುನಾವಣೆ ನಡೆದ ನಂತರ ರಾಜ್ಯದಲ್ಲಿ ಉಪ ಚುನಾವಣೆಯದ್ದೇ ಸದ್ದು ಶುರುವಾಗಿದೆ. ಇನ್ನೂ ಚುನಾವಣೆ ಘೋಷಣೆಯಾಗದಿದ್ದರೂ ಅಭ್ಯರ್ಥಿಗಳ ಆಯ್ಕೆ ಮೈತ್ರಿ ಹಾಗೂ ಕಾಂಗ್ರೆಸ್ ಪಾಳಯದಲ್ಲಿ ಸದ್ದು ಮಾಡುತ್ತಿದೆ.
ಕರ್ನಾಟಕದ (Karnataka) ಮೂರು ಕ್ಷೇತ್ರಗಳಿಗೆ ಉಪ ಚುನಾವಣೆಯ ನಡೆಯಲಿದೆ. ಹೀಗಾಗಿ ಮೂರು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಕಾರಣಕ್ಕೆ ಬಿಜೆಪಿ ಬಿಜೆಪಿಯಿಂದ (BJP) ತಂತ್ರ ನಡೆಯುತ್ತಿದೆ. ಈಗಿನಿಂದಲೇ ಬಿಜೆಪಿ ಪಾಳಯದಲ್ಲಿ ಗೆಲುವಿಗಾಗಿ ಸೂಕ್ತ ಅಭ್ಯರ್ಥಿಗಳ ಹುಡುಕಾಟ ನಡೆಯುತ್ತಿದೆ. ಇದಕ್ಕಾಗಿಯೇ ತಂಡ ರಚನೆ ಮಾಡಿದೆ.
ಮೂರು ಕ್ಷೇತ್ರಕ್ಕೂ ಮೂರು ತಂಡಗಳನ್ನು ರಚಿಸಲಾಗಿದೆ. ಚನ್ನಪಟ್ಟಣ (Channapatna) ಕ್ಷೇತ್ರಕ್ಕೆ ಡಾ.ಸಿ.ಎನ್.ಅಶ್ವತ್‌ನಾರಾಯಣ, ಸಂಡೂರಿಗೆ (Sanduru) ಸಿ ಟಿ ರವಿ, ಶಿಗ್ಗಾವಿಗೆ (Shiggaon) ಆರ್ ಅಶೋಕ್ ನೇತೃತ್ವದ ತಂಡವನ್ನು ರಚನೆ ಮಾಡಲಾಗಿದೆ. ಕ್ಷೇತ್ರಗಳಿಗೆ ತೆರಳಿ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಕ್ಕೆ ಸೂಚನೆ ನೀಡಲಾಗಿದೆ. ವರದಿಗಳು ಪೂರ್ಣಗೊಂಡ ನಂತರ ಹೈಕಮಾಂಡ್ ಗೆ ಕಳುಹಿಸಲು ಬಿಜೆಪಿ ನಿರ್ಧಾರ ಮಾಡಿದೆ.
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. 2008, 2013, 2018 ಹಾಗೂ 2023ರ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧಿಸಿ ಸತತವಾಗಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ಅನಿವಾರ್ಯ ಕಾರಣದಿಂದ ಅವರು ಹಾವೇರಿ-ಗದಗ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಹೀಗಾಗಿ ಅವರು ಈಗ ತಮ್ಮ ಕ್ಷೇತ್ರ ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಮಗನನ್ನು ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.
ಚನ್ನಪಟ್ಟಣದಿಂದ ಜೆಡಿಎಸ್ ಶಾಸಕರಾಗಿದ್ದ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭೆಯಿಂದ ಗೆದ್ದು ಕೇಂದ್ರದಲ್ಲಿ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವರಾಗಿದ್ದಾರೆ. ಹೀಗಾಗಿ ಈ ಕ್ಷೇತ್ರ ಕೂಡ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಕಾಂಗ್ರೆಸ್ ನಿಂದ ಡಿಕೆಶಿ ಅಖಾಡಕ್ಕೆ ಇಳಿಯಲಿದ್ದಾರೆ ಎಂಬ ಚರ್ಚೆಯ ಮಧ್ಯೆಯೇ ಈ ಕ್ಷೇತ್ರ ಭಾರೀ ಸದ್ದು ಮಾಡುತ್ತಿದೆ. ಜೆಡಿಎಸ್ ಪಾಲಾಗಿದ್ದ ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಮೈತ್ರಿ ಮುಂದಾಗಿದ್ದರೆ, ಕಾಂಗ್ರೆಸ್ ತನ್ನ ಅಧಿಪತ್ಯ ಸ್ಥಾಪಿಸಲು ಯತ್ನಿಸುತ್ತಿದೆ. ಹೀಗಾಗಿ ಸ್ವತಃ ಡಿಕೆಶಿ ಚನ್ನಪಟ್ಟಣ ಸುತ್ತುತ್ತಿದ್ದಾರೆ. ಆರಂಭದಲ್ಲಿ ಡಿಕೆಶಿ ಅಥವಾ ಡಿಕೆ ಸುರೇಶ್ ಕಣಕ್ಕೆ ಇಳಿಯುತ್ತಾರೆ ಎನ್ನಲಾಗಿತ್ತು. ಆನಂತರ ಡಿಕೆಶಿ ಕಣದಿಂದ ಹಿಂದೆ ಸರಿಯುವ ಸುಳಿವು ನೀಡಿದ್ದಾರೆ. ಆದರೂ ಇನ್ನೂ ಯಾರು ಸ್ಪರ್ಧೆ ಮಾಡುತ್ತಾರೆ ಎಂಬ ಸುಳಿವು ಸಿಗುತ್ತಿಲ್ಲ. ಆದರೂ ಕಾಂಗ್ರೆಸ ಒಳ ತಂತ್ರ ರೂಪಿಸುವ ಕಾರ್ಯ ಮಾಡುತ್ತಲೇ ಇದೆ.
ಸಂಡೂರು ಕಾಂಗ್ರೆಸ್ ಶಾಸಕರಾಗಿದ್ದ ಈ ತುಕಾರಾಂ ಅವರು ಬಳ್ಳಾರಿಯಿಂದ ಗೆದ್ದಿದ್ದರಿಂದ ಸಂಡೂರು ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಕಾಂಗ್ರೆಸ್ ನ ಭದ್ರಕೋಟೆಯಾಗಿರುವ ಸಂಡೂರಿನಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಗೆಲ್ಲಿಸಲು ಸೂಕ್ತ ಅಭ್ಯರ್ಥಿಯ ಹುಡುಕಾಟ ನಡೆಯುತ್ತಿದೆ. ಈಮಧ್ಯೆ ಲೋಕಸಭೆಯ ಸೋಲಿನ ಸೇಡು ತೀರಿಸಿಕೊಳ್ಳುವುದಕ್ಕಾಗಿ ಶ್ರೀರಾಮುಲು ಸಂಡೂರಿನಿಂದ ಸ್ಪರ್ಧಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಹೈಕಮಾಂಡ್ ಬೇರೆಯವರಿಗೆ ಮಣೆ ಹಾಕಲು ಚಿಂತನೆ ನಡೆಸಿದೆ. ಈ ಮಧ್ಯೆ ಯಾರು ಸ್ಪರ್ಧೆ ಮಾಡುತ್ತಾರೆ ಎಂಬ ಕುತೂಹಲ ಮೂಡಿಸಿದೆ. ಹೀಗಾಗಿಯೇ ಸಮಿತಿ ರಚಿಸಲಾಗಿದ್ದು, ಬಿಜೆಪಿ ಮೂರೂ ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ನೀಡಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.


















