ರಾಜ್ಯದಲ್ಲಿ ಡೆಂಗ್ಯೂ ಭೀಕರತೆಯ ಆತಂಕ ಮನೆ ಮಾಡುತ್ತಿದೆ. ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾವುಗಳು ಕೂಡ ಸಂಭವಿಸುತ್ತಿವೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಇದೆ.
ಮಳೆಗಾಲದ ಆರಂಭ ಸೊಳ್ಳೆಗಳ ಸಂತಾನೋತ್ಪತ್ತಿಗೆ ಹೇಳಿ ಮಾಡಿಸಿದ ಸಮಯ. ಮಳೆಗಾಲದ ಆರಂಭದಲ್ಲಿ ನಿಂತ ನೀರಿನ ಜಾಗವನ್ನೇ ಆಶ್ರಯಿಸಿಕೊಂಡು ಸಂತಾನ ಬೆಳೆಸಿ, ಮನುಷ್ಯರ ಮೇಲೆ ದಾಳಿ ಮಾಡಿ ಸೊಳ್ಳೆಗಳು ರಕ್ತ ಹೀರುತ್ತವೆ. ಅವುಗಳು ರಕ್ತ ಹೀರಿಕೊಂಡು ಹೋದರೆ ಅಷ್ಟೇನು ತೊಂದರೆ ಇಲ್ಲ. ಏಕೆಂದರೆ ನಮ್ಮಲ್ಲಿ ರಕ್ತ ದಾನ ಮಾಡಿದರೆ, ಮತ್ತೆ ರಕ್ತ ಹುಟ್ಟುತ್ತದೆ. ಅವುಗಳ ಹೊಟ್ಟೆಯೂ ತುಂಬುತ್ತದೆ. ಇದು ಇಷ್ಟೆ ಆದರೆ ಉತ್ತಮ. ಆದರೆ, ಅವುಗಳ ಕಡಿತದಿಂದ ಮಾರಕ ಸೋಂಕು ಹರಡುತ್ತಿರುವುದು ಜನರು ಬದುಕೇ ರೋಗದೊಂದಿಗೆ ಹೋರಾಡುವಂತಾಗಿದೆ.

ಈ ಹೋರಾಟದಲ್ಲಿ ಹಲವರು ಇಹಲೋಕವನ್ನೂ ತ್ಯಜಿಸುತ್ತಿದ್ದಾರೆ. ಇದು ಇಡೀ ರಾಜ್ಯದ ಆತಂಕಕ್ಕೆ ಕಾರಣವಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಜನವರಿಯಿಂದ 6,187 ಡೆಂಗ್ಯೂ ಕೇಸ್ ದಾಖಲಾಗಿವೆ. ಈ ಸಮಯದಲ್ಲಿ ಕಳೆದ ಬಾರಿ 2,900 ಕೇಸ್ ದಾಖಲಾಗಿತ್ತು. ಒಟ್ಟಾರೆ ದಾಖಲಾಗಿರುವ ಪ್ರಕರಣಗಳಲ್ಲಿ ಶೇ. 56ರಷ್ಟು ಗ್ರಾಮೀಣ ಭಾಗದಲ್ಲಿ ಪತ್ತೆಯಾಗಿವೆ. ನಗರ ಪ್ರದೇಶಗಳಲ್ಲಿ ಶೇ. 44 ಪಾಸಿಟಿವ್ ಆಗಿದೆ. ಈ ಪೈಕಿ ಇಲ್ಲಿಯವರೆಗೆ 6 ಜನ ಬಲಿಯಾಗಿದ್ದಾರೆ. ಪ್ರಕರಣಗಳೂ ದಿನೇ ದಿನೆ ಹೆಚ್ಚುತ್ತಿವೆ. ಮಾರಕ ಸೋಂಕಿಗೆ ಅಲ್ಲಲ್ಲಿ ಜನರು ಉಸಿರು ಚೆಲ್ಲುತ್ತಿರುವುದು ಕಳವಳ ಮೂಡಿಸಿದೆ. ಈ ವರ್ಷದಲ್ಲಿ ದೇಶದಲ್ಲೇ ಡೆಂಗ್ಯೂ ವೈರಸ್ ಸೋಂಕಿಗೆ ಕರ್ನಾಟಕದ ಬೆಂಗಳೂರಿನಲ್ಲಿ ಮೊದಲ ಬಲಿಯಾಗಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ ಎಂದು ಕೂಡ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆತಂಕ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಜನರು ಸೊಳ್ಳೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ನೀರು ಶೇಖರಣೆಯಾಗುವ ಯಾವುದೇ ಪ್ರದೇಶವಿದ್ದರೂ ಶುಚಿಗೊಳಿಸಬೇಕು. ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸರಾಗವಾಗಿ ನೀರು ಹರಿಯುವಂತೆ ಚರಂಡಿ, ಮೋರಿಗಳನ್ನು ಸುಸ್ಥಿತಿಯಲ್ಲಿಡಬೇಕು. ಮನೆ, ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸೊಳ್ಳೆ ನಿವಾರಕ ಬಳಕೆ ಮಾಡಬೇಕು. ಹೀಗಾಗಿ ಕೂಡಲೇ ಇಂತಹ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿದರೆ, ದೊಡ್ಡ ಅನಾಹುತದಿಂದ ಪ್ರತಿಯೊಬ್ಬರು ತಪ್ಪಿಸಿಕೊಳ್ಳಬಹುದು.
