ಕಾರವಾರ: ಕರ್ನಾಟಕದ ಕರಾವಳಿಯ ಬೆಡಗಿ ವಿಶ್ವ ಸಂದುರಿ ಪಟ್ಟ ಅಲಂಕರಿಸಿದ್ದಾರೆ.
ಉತ್ತರ ಕನ್ನಡ (UttaraKannada) ಜಿಲ್ಲೆಯ ಶಿರಸಿ ತಾಲೂಕಿನ ಮುಂಡಿಗೆಸರ ಮೂಲದ ಯುವತಿಯು ಅಮೆರಿಕದಲ್ಲಿ ಜರುಗಿದ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿ ಕಿರೀಟ ತೊಟ್ಟಿದ್ದಾರೆ.
ಮೂಲತಃ ಮುಂಡಿಗೆಸರ ಅಜ್ಜೊರಮನೆ ಕುಟುಂಬದವರಾಗಿರುವ ಶೃತಿ ಹಗಡೆ ಅಮೆರಿಕದಲ್ಲಿ (USA) ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾರೆ.
ಹುಬ್ಬಳ್ಳಿಯಲ್ಲಿ ನೆಲೆಸಿದ ಕೃಷ್ಣ ಹೆಗಡೆ, ಕಮಲಾ ದಂಪತಿಯ ಪುತ್ರಿ ಶೃತಿ ಹೆಗಡೆ (Shruti Hegde) ಅಮೆರಿಕದಲ್ಲಿ ವಿಶ್ವ ಸುಂದರಿಯಾಗದ್ದಾರೆ. ಇದಕ್ಕೂ ಮುನ್ನ ಶೃತಿ ಹೆಗಡೆ ಅವರು 2018 ರಲ್ಲಿ ಮಿಸ್ ಕರ್ನಾಟಕ ರನ್ನರ್ ಅಪ್, ಮಿಸ್ ಸೌತ್ ಇಂಡಿಯಾ (Miss South India) ವಿಜೇತೆಯಾಗಿದ್ದರು. 2023 ರಲ್ಲಿ ಮಿಸ್ ಏಷ್ಯಾ ಇಂಟರ್ ನ್ಯಾಷನಲ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದರು. ಈಗ ಅಮೆರಿಕದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಫ್ಲೋರಿಡಾದಲ್ಲಿ ಕಳೆದ ಜೂ.6 ರಿಂದ 10ರ ವರೆಗೆ ನಡೆದಿದ್ದ ಸ್ಪರ್ಧೆಯಲ್ಲಿ ಭಾರತ ಸೇರಿದಂತೆ ಒಟ್ಟು 40 ದೇಶಗಳ ಸುಂದರಿಯರು ಭಾಗವಹಿಸಿದ್ದರು. ಈ ವೇಳೆ ಎಲ್ಲರನ್ನೂ ಹಿಂದಿಕ್ಕಿ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ. ರಾಷ್ಟ್ರೀಯ ಉಡುಗೆ, ಪ್ರಶ್ನೋತ್ತರ, ವಯಕ್ತಿಕ ಸಂದರ್ಶನ ಸೇರಿ ಹಲವು ಸುತ್ತುಗಳನ್ನು ಇಲ್ಲಿ ಏರ್ಪಡಿಸಲಾಗಿತ್ತು. ಆದರೆ, ಶೃತಿ ಎಲ್ಲ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ವಿಜೇತೆಯಾಗಿದ್ದಾರೆ.
ಹುಬ್ಬಳ್ಳಿಯಲ್ಲಿಯೇ ಎಂಬಿಬಿಎಸ್ ಮುಗಿಸಿರುವ ಡಾ.ಶೃತಿ ಹೆಗಡೆ ಅವರು ಚರ್ಮ ರೋಗ ತಜ್ಞೆಯಾಗುವುದಕ್ಕಾಗಿ ತುಮಕೂರಿನಲ್ಲಿ ಎಂ.ಡಿ. ಅಧ್ಯಯನ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ಇವರು ಕೆಲವು ಧಾರಾವಾಹಿ, ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ.
