ಬೆಂಗಳೂರು: ಇತ್ತೀಚೆಗಷ್ಟೇ ಆರ್ ಸಿಬಿ ತಂಡದಲ್ಲಿದ್ದ ದಿನೇಶ್ ಕಾರ್ತಿಕ್ ನಿವೃತ್ತಿ ಪಡೆದಿದ್ದರು. ಆದರೆ, ಈಗ ತಂಡ ಅವರಿಗೆ ದೊಡ್ಡ ಅವಕಾಶ ನೀಡಿ, ಮರಳಿ ಮತ್ತೆ ಸೇರ್ಪಡೆ ಮಾಡಿಕೊಂಡಿದೆ. ಆದರೆ, ಈ ಬಾರಿ ಆಟಗಾರನಾಗಿ ಅಲ್ಲ ಕೋಚ್ (Batting Coach) ಮತ್ತು ಮೆಂಟರ್ (Mentor) ಆಗಿ.
ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ನಂತರ ದಿನೇಶ್ ಕಾರ್ತಿಕ್ ಈಗ ಮತ್ತೆ ಹೊಸ ಜವಾಬ್ದಾರಿ ತೊಟ್ಟಿದ್ದಾರೆ. ಡಿಕೆ ಆರ್‌ಸಿಬಿ ಪುರುಷರ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿರುತ್ತಾರೆ ಎಂದು ಆರ್‌ಸಿಬಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ. ಅಹಮದಾಬಾದ್ನಲ್ಲಿ ನಡೆದ ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲನುಭವಿಸಿದ ನಂತರ ಆರ್ಸಿಬಿ ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಐಪಿಎಲ್ ಗೆ ನಿವೃತ್ತಿ ಘೋಷಿಸಿದ್ದರು.

ವಿಕೆಟ್ ಕೀಪರ್, ಬ್ಯಾಟರ್ ಆಗಿರುವ ದಿನೇಶ್ ಕಾರ್ತಿಕ್ ಐಪಿಎಲ್ ನಲ್ಲಿ (IPL) 257 ಪಂದ್ಯಗಳನ್ನು ಆಡಿದ್ದಾರೆ. 26.32 ಸರಾಸರಿಯಲ್ಲಿ 22 ಅರ್ಧಶತಕಗಳೊಂದಿಗೆ 4,842 ರನ್ ಗಳಿಸಿದ್ದಾರೆ. ಕಾರ್ತಿಕ್ ಆರ್‌ಸಿಬಿ ಹೊರತಾಗಿ ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕೂಡ ಆಡಿದ್ದಾರೆ. 7 ರನ್ ಬಾರಿಸಿದ್ದು ಅವರ ಗರಿಷ್ಠ ಸ್ಕೋರ್. 2019 ರಲ್ಲಿ ರಾಜಸ್ಥಾನ ತಂಡದ ನಾಯಕರಾಗಿದ್ದ ಇವರು 97 ರನ್(50 ಎಸೆತ,7 ಬೌಂಡರಿ, 9 ಸಿಕ್ಸ್ ) ಸಿಡಿಸಿದ್ದರು. ಧೋನಿ ನಂತರ ಅತೀ ಹೆಚ್ಚು ಪಂದ್ಯವಾಡಿದ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ಕೂಡ ದಿನೇಶ್ ಹೊಂದಿದ್ದಾರೆ.
