ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ, ಡಿಸಿಎಂ ಕುರ್ಚಿಯ ಜಗಳ ಬೀದಿಗೆ ಬಂದು ನಿಂತಿದೆ. ಈಗ ಮಠಾಧೀಶರು ಕೂಡ ಜಾತಿಯ ಬೆನ್ನು ಬಿದ್ದು ಸಿಎಂ ಸ್ಥಾನದ ಬಕೆಟ್ ಹಿಡಿಯೋಕೆ ಶುರು ಮಾಡಿದ್ದಾರೆ. ಜಾತಿ ಮುಂದಿಟ್ಟುಕೊಂಡು ಲಾಬಿ ನಡೆಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ಅಭಿವೃದ್ಧಿಗಿಂತ, ಕುರ್ಚಿಯತ್ತ ಗಮನ ಹರಿಸಿದ್ದಾರೆ. ಇದೊಂಥರ ಮೈತ್ರಿ ಸರ್ಕಾರದ ಜಗಳದಂತೆ ಕಂಡು ಬರುತ್ತಿದೆ ಎಂದರೆ ತಪ್ಪಾಗಲಾರದು. ಕಾಂಗ್ರೆಸ್ ಬಹುಮತ ಗಳಿಸಿದರೂ ಕುರ್ಚಿಯ ಕಿತ್ತಾಟ ಜೀವಂತ ಇದೆ.
ನೇರವಾಗಿ ಹೇಳಬೇಕೆಂದರೆ ಈ ಫೈಟ್ ಡಿಕೆಶಿ ಹಾಗೂ ಸಿದ್ದರಾಮಯ್ಯ ಬಣದ ನಡುವಿನ ಸಮರ ಎಂದೇ ಹೇಳಬಹುದು. ಸಿದ್ದರಾಮಯ್ಯ ಬಣದ ಹೆಚ್ಚುವರಿ ಡಿಸಿಎಂ ಹುದ್ದೆ ಅಸ್ತ್ರಕ್ಕೆ ಡಿಕೆ ಬಣ ಬಳಸಿದ ಪ್ರತ್ಯಸ್ತ್ರವೇ ಕಾಂಗ್ರೆಸ್ ನಲ್ಲಿ ಯುದ್ಧಕ್ಕೆ ನಾಂದಿ ಹಾಡಿದಂತಿದೆ. ಒಕ್ಕಲಿಗ ಸ್ವಾಮೀಜಿಯೊಬ್ಬರು ಡಿಕೆ ಪರವಾಗಿ ಮಾಡಿರುವ ಬ್ಯಾಟಿಂಗ್ ಸಿದ್ದು ಬಣದ ಸಿಡುಕಿಗೆ ಕಾರಣವಾಯಿತು. ಆಗಲೇ ಮತ್ತೊಬ್ಬ ಲಿಂಗಾಯತ ಮಠಾಧೀಶರು ಎಂಟ್ರಿಕೊಟ್ಟು ವೀರಶೈವ ಲಿಂಗಾಯತ ಸಮುದಾಯಕ್ಕೆ ನೀಡಿ ಎಂದರು. ಹೈಕಮಾಂಡ್ ಕೂಡ ಇದನ್ನು ನೋಡಿ ಕುಳಿತಿದೆಯೋ ಅಥವಾ ತಂತ್ರ ರೂಪಿಸುತ್ತಿದೆಯೋ ತಿಳಿಯದಾಗಿದೆ. ಇದನ್ನೆಲ್ಲ ಗಮನಿಸಿದರೆ, ಹಾಗಾದರೆ ಸಿದ್ದರಾಮಯ್ಯಗೆ ಐದು ವರ್ಷ ಆಡಳಿತ ನಡೆಸುವುದು ಆಗಲ್ಲವಾ? ಅಥವಾ ಈ ಸರ್ಕಾರಕ್ಕೆ ಐದು ವರ್ಷ ಆಡಳಿತ ನಡೆಸಲು ಆಗಲ್ಲವಾ? ಎಂಬ ಚಿಂತೆ ಈಗ ಕಾಂಗ್ರೆಸ್ ಪಾಳಯದಲ್ಲಿ ಶುರುವಾಗಿದೆ.

ಸಿದ್ದರಾಮಯ್ಯಗೆ ಈಗ ಇರುವುದು ಅಹಿಂದ ವರ್ಗದ ಬೆಂಬಲ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಹಾಗೂ ದಲಿತರ ಬೆಂಬಲ ಸಿದ್ಧರಾಮಯ್ಯಗೆ ಇರುವಷ್ಟು ಕಾಂಗ್ರೆಸ್ ನ ಯಾವೊಬ್ಬ ನಾಯಕರಿಗೂ ಇಲ್ಲ. ಇನ್ನೂ ಒಕ್ಕಲಿಗ ಸಮುದಾಯ ಸ್ವಾಮೀಜಿ ಹೇಳಿದ್ದಕ್ಕೆ ಇನ್ನೊಂದು ಪ್ರಭಲ ಜಾತಿಯಾಗಿರುವ ಲಿಂಗಾಯತ ಸಮುದಾಯಕ್ಕೆ ಬೇಸರವಾಗಿದೆ. ಅಲ್ಲದೇ, ಹಿಂದುಳಿದ ವರ್ಗದವರ ಕೂಗೂ ಕೇಳಿ ಬರಬುಹುದು. ಒಂದು ವೇಳೆ ಒಕ್ಕಲಿಗ ಸಮುದಾಯಕ್ಕೆ ಅಂದರೆ ಡಿಕೆಶಿ ಬೇಡಿಕೆಗೆ ಏನಾದರೂ ಹೈಕಮಾಂಡ್ ಅಸ್ತು ಅಂದು, ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಿದರೆ, ಇನ್ನುಳಿದ ಸಮುದಾಯದ ಬೇಸರಕ್ಕೆ ಕಾರಣವಾಗಬಹುದು. ಹೀಗಾಗಿ ಸದ್ಯಕ್ಕೆ ಸಿದ್ದರಾಮಯ್ಯ ಸೇಫ್!? ಅನ್ನಬಹುದು.
ಏಕೆ ಗೊತ್ತಾ ವಿಧಾನಸಭೆ ಚುನಾವಣೆಯಲ್ಲೂ ಈ ವರ್ಗಗಳ ಮತಗಳು ಕಾಂಗ್ರೆಸ್‌ಗೆ ಪೂರ್ಣ ಪ್ರಮಾಣದಲ್ಲಿ ಚಲಾವಣೆಯಾಗಿವೆ. ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಬಹುಮುಖ್ಯವಾದದ್ದು. ತಮ್ಮ ಜನಪರ ಹಾಗೂ ಜಾತ್ಯತೀತ ನಿಲುವುಗಳ ಮೂಲಕ ಗುರುತಿಸಿಕೊಂಡಿರುವ ಸಿದ್ದರಾಮಯ್ಯ, ಈ ವರ್ಗಗಳ ಬೆಂಬಲ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ರಾಜಕೀಯ ಭವಿಷ್ಯಕ್ಕೂ ಶ್ರೀರಕ್ಷೆಯಾಗಿ ನಿಂತಿದೆ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಟಚ್ ಮಾಡೋದು ಅಷ್ಟು ಸುಲಭವಲ್ಲ.

2013 ರಲ್ಲಿ ಕೂಡ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಅವರು ಅನ್ನಭಾಗ್ಯ ಸೇರಿದಂತೆ ಕೆಲವೊಂದು ಜನಪರವಾದ ಯೋಜನೆಗಳನ್ನು ಘೋಷಣೆ ಮಾಡಿ ಜಾರಿಗೆ ತಂದಿದ್ದರು. ಆದರೆ, ಆ ಐದು ವರ್ಷಗಳಲ್ಲಿ ಗಂಭೀರ ಸ್ವರೂಪದ ಭ್ರಷ್ಟಾಚಾರ ಆರೋಪ ಅವರ ಸರ್ಕಾರದ ವಿರುದ್ಧ ಬಂದಿರಲಿಲ್ಲ. ಕೊಟ್ಟ ಭರವಸೆಗಳನ್ನೂ ಈಡೇರಿಸಲಾಗಿತ್ತು. ಐದು ವರ್ಷಗಳಲ್ಲಿ ಸಿದ್ದರಾಮಯ್ಯ ಅವರು ಆಡಳಿತದ ಉತ್ತಮ ಅನುಭವವನ್ನು ಗಳಿಸಿದ್ದರು. ಅಲ್ಲದೆ ಅವರ ಐದು ವರ್ಷಗಳ ಆಡಳಿತದ ಬಗ್ಗೆ ಉತ್ತಮ ಅಭಿಪ್ರಾಯಗಳು ಕೂಡ ಕೇಳಿ ಬಂದಿದ್ದವು. ಇದೀಗ ಮತ್ತೊಮ್ಮೆ ಸಿಎಂ ಆಗಿ ಅಧಿಕಾರ ನಡೆಸುವ ಸಂದರ್ಭದಲ್ಲೂ ಅನುಕೂಲಕರವಾಗಿ ಪರಿಣಮಿಸಿದೆ. ಸಿಎಂ ಸಿದ್ದರಾಮಯ್ಯಗೆ 76 ವರ್ಷ. ಅವರ ಹಿರಿತನವೂ ಅವರಿಗೆ ಸಿಎಂ ಸ್ಥಾನ ಮುಂದುವರಿಯಲು ಪ್ಲಸ್ ಪಾಯಿಂಟ್. ಅವರಿಗೆ ರಾಜಕೀಯವಾಗಿ ತಮ್ಮದೇ ಆದ ವರ್ಚಸ್ಸು ಇದೆ. ಅವರನ್ನು ಒಪ್ಪುವ ದೊಡ್ಡ ಜನ ಸಮೂಹ ಇದೆ. 75 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಹರಿದು ಬಂದ ಅಭಿಮಾನಿ ಸಾಗರವೇ ಇದಕ್ಕೆ ಉದಾಹರಣೆ. ಹೀಗಾಗಿಯೇ ಅವರು ತಮ್ಮ ಹಿರಿತನ, ಅನುಭವ, ಜ್ಞಾನ, ತಂತ್ರ-ಪ್ರತಿತಂತ್ರ, ವರ್ಚಸ್ಸಿನ ಕಾರಣದಿಂದಾಗಿ ವಿರೋಧ ಪಕ್ಷದ ನಾಯಕನಾಗಿಯೂ ಉತ್ತಮ ಹೆಸರು ಮಾಡಿದ್ದರು. ಅಲ್ಲದೇ, ಆಡಳಿತ ಪಕ್ಷದ ನಾಯಕನಾಗಿಯೂ ಅವರು ಯಶಸ್ವಿ ಆಗಿದ್ದಾರೆ.
ಸಿದ್ದರಾಮಯ್ಯ ಅವರ ವಿರುದ್ಧ ನೇರವಾಗಿ ಬೊಟ್ಟು ಮಾಡುವಂತಹ ಭ್ರಷ್ಟಾಚಾರದ ಆರೋಪ ಇಲ್ಲ. ಯಾವುದೇ ಹಗರಣಗಳು ಅವರ ಸುತ್ತ ಸುತ್ತಿಕೊಂಡಿಲ್ಲ. ಯಾವುದೇ ಪ್ರಕರಣಗಳೂ ದಾಖಲಾಗಿಲ್ಲ. ಆರ್ಕಾವತಿ ಹಗರಣ ಅವರು ಈ ಹಿಂದೆ ಸಿಎಂ ಆಗಿದ್ದಾಗ ಆರೋಪಗಳು ಕೇಳಿಬಂದಿದ್ದರೂ ಅದರಲ್ಲಿ ಇವರ ನೇರ ಪಾತ್ರದ ಬಗ್ಗೆ ಸಾಬೀತಾಗಿಲ್ಲ. ಅವರ ಪುತ್ರನ ಫೋನ್ ಸಂಭಾಷಣೆಯನ್ನು ಮುಂದಿಟ್ಟುಕೊಂಡು ವರ್ಗಾವಣೆ ದಂಧೆಯ ವಿರುದ್ಧ ವಿರೋಧ ಪಕ್ಷಗಳು ಆರೋಪ ಮಾಡಿದ್ದರೂ, ಅದು ಯಶಸ್ವಿಯಾಗಿಲ್ಲ. ಹೀಗಾಗಿ ವೈಯಕ್ತಿಕ ಭ್ರಷ್ಟಾಚಾರದ ಆರೋಪ ಇಲ್ಲದೆ ಇರುವುದು ಕೂಡ ಸಿದ್ದು, ವಿರೋಧಿಗಳಿಗೆ ಗುದ್ದು ಕೊಡಲು ಕಾರಣವಾಗಿದೆ.

ಇನ್ನು ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಘಟಾನುಘಟಿ ನಾಯಕರ ಬೆಂಬಲವೂ ಇದೆ. ಅದರಲ್ಲೂ ಕೆ ಎನ್ ರಾಜಣ್ಣ, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಎಚ್‌ಸಿ ಮಹದೇವಪ್ಪ ಸೇರಿದಂತೆ ಸಂಪುಟದ ಬಹುತೇಕ ಸಚಿವರು ಸಿದ್ದರಾಮಯ್ಯ ಪರವಾಗಿದ್ದಾರೆ. ಈ ಘಟಾನುಘಟಿ ನಾಯಕರ ಬೆಂಬಲವೇ ಸಿದ್ದರಾಮಯ್ಯಗೆ ಐದು ವರ್ಷ ಮುಂದುವರಿಯಲು ಅನುಕೂಲ ಆಗಬಹುದು ಎಂದೇ ಭಾವಿಸಲಾಗುತ್ತಿದೆ.
ಹೌದು…ಒಕ್ಕಲಿಗ ಸ್ವಾಮೀಜಿಯ ತಂತ್ರ ತಿರುಗುತ್ತಿದ್ದಂತೆ ಡಿಕೆಶಿ ಯಾರಿಗೂ ಸಿಎಂ ಸ್ಥಾನದ ಬಗ್ಗೆ ಮಾತನಾಡದಂತೆ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಡಿಕೆಶಿ ಇನ್ನು ಮುಂದೆ ಮೌನ ವಹಿಸುವ ಸಾಧ್ಯತೆಯೂ ಇದೆ. ಸಿದ್ದರಾಮಯ್ಯ ವರ್ಚಸ್ವಿ ನಾಯಕ ಎಂಬುವುದಕ್ಕೆ ಅವರಿಗೆ ವಿರೋಧ ಪಕ್ಷದಲ್ಲೂ ಸಿಗುವ ಗೌರವ ಇದಕ್ಕೆ ಸಾಕ್ಷಿಯಾಗಿದೆ. ಸದನದಲ್ಲಿ ಸಿದ್ದರಾಮಯ್ಯ ಅವರು ವಿರೋದ ಪಕ್ಷದ ನಾಯಕರಾಗಿದ್ದಾಗಲೂ ಅವರಿಗೆ ಆಡಳಿತ ಪಕ್ಷದ ನಾಯಕರು ಗೌರವಿಸುತ್ತಿದ್ದರು. ಎ ಸೈದ್ದಾಂತಿಕ ವಿರೋಧ ಇದ್ದರೂ ಬಿಜೆಪಿಯ ಹಲವು ನಾಯಕರು ಸಿದ್ದರಾಮಯ್ಯಗೆ ವೈಯಕ್ತಿಕವಾಗಿ ಗೌರವ ಕೊಡುತ್ತಾರೆ.

ಸಿಎಂ ಸಿದ್ದರಾಮಯ್ಯಗೆ 76 ವಯಸ್ಸು. ಆದರೆ ಆರೋಗ್ಯವಾಗಿ ಉತ್ತಮವಾಗಿದೆ. ಹೀಗಿದ್ದರೂ ಮೀರುತ್ತಿರುವ ವಯಸ್ಸು ಅವರಿಗೆ ರಾಜಕೀಯವಾಗಿ ಸಹಜ ಹಿನ್ನಡೆಯಾಗಿದೆ. ಇದನ್ನೇ ಮುಂದಿಟ್ಟುಕೊಂಡು ಅವರ ವಿರೋಧಿ ಪಾಳಯ ಸಿಎಂ ಸ್ಥಾನಕ್ಕಾಗಿ ಬೇಡಿಕೆ ಇಡಬಹುದು. ಸಿದ್ದರಾಮಯ್ಯ ಒಂದು ವರ್ಗಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಾರೆ ಎಂಬ ಆರೋಪ ಇದೆ. ಅದರಲ್ಲೂ ಅಹಿಂದ ನಾಯಕ ಎಂದು ಗುರುತಿಸಿಕೊಂಡರೂ ಹಿಂದುಳಿದ ವರ್ಗ, ಅದರಲ್ಲೂ ಅತಿ ಹಿಂದುಳಿದ ವರ್ಗಕ್ಕೆ ಅವರ ಕೊಡುಗೆ ಏನು ಎಂಬ ಪ್ರಶ್ನೆಯನ್ನು ಕೆಲವರು ಕೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ನಾಯಕರನ್ನು ಅವರು ಸೈಡ್ ಲೈನ್ ಮಾಡಿದ್ದಾರೆ ಎಂಬ ಆರೋಪವೂ ಇದೆ. ಹಿಂದುಳಿದ ವರ್ಗಗಳ ನಾಯಕರನ್ನು ಬೆಳೆಯಲು ಬಿಡಲ್ಲ ಎಂಬ ಆರೋಪವೂ ಇರುವುದನ್ನೇ ದಾಳವಾಗಿಸಿಕೊಂಡು ಕಾಂಗ್ರೆಸ್ ನ ಇನ್ನಿತರ ಸಿಎಂ ಆಕಾಂಕ್ಷಿಗಳು ಚೆಕ್ ಮೇಟ್ ಕೊಡುತ್ತಲೇ ಇದ್ದಾರೆ. ಆದರೂ ಅಂತಿಮವಾಗಿ ಸಿದ್ದು ವಿರೋಧಿಗಳಿಗೆ ಗುದ್ದು ನೀಡಿ ಕುರ್ಚಿಯಲ್ಲಿಯೇ ಕುಳಿತುಕೊಳ್ಳುತ್ತಾರಾ ಅಥವಾ ಆ ಗುದ್ದಿಗೆ ತಾವೇ ಬಲಿಯಾಗುತ್ತಾರಾ ಕಾಯ್ದು ನೋಡಬೇಕಿದೆ.