ಕೊಲಂಬೊ: ಆನಾ ಲೈನ್ ಹಣಕಾಸು ವಂಚನೆಯ (Cyber Crime) ಹಿನ್ನೆಲೆಯಲ್ಲಿ 60 ಜನ ಭಾರತೀಯ ಪ್ರಜೆಗಳನ್ನು ಶ್ರೀಲಂಕಾ (Sri Lanka)ದಲ್ಲಿ ಅರೆಸ್ಟ್ ಮಾಡಲಾಗಿದೆ.
ಶ್ರೀಲಂಕಾದ ಕೊಲಂಬೊ, ಸುತ್ತಮುತ್ತಲಿನ ಮಡಿವೇಲಾ, ಬಟ್ಟರಮುಲ್ಲಾ ಹಾಗೂ ಪಶ್ಚಿಮ ಕರಾವಳಿ ಪಟ್ಟಣವಾದ ನೆಗೊಂಬೊದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಈ ಎಲ್ಲ ಪ್ರದೇಶಗಳ ಮೇಲೆ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಬಂಧಿತ ಆರೋಪಿಗಳಿಂದ 135 ಮೊಬೈಲ್ ಫೋನ್‍ಗಳು ಮತ್ತು 57 ಲ್ಯಾಪ್‍ಟಾಪ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ಸಂತ್ರಸ್ತೆಯೊಬ್ಬರ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಬಂಧಿತರು ವಾಟ್ಸಾಪ್ ಮೂಲಕ ಜನರನ್ನು ಸಂಪರ್ಕಿಸಿ ಹಣದ ಆಮಿಷ ಒಡ್ಡುತ್ತಿದ್ದರು. ನಂತರ ಠೇವಣಿ ಇಡುವಂತೆ ಸೂಚಿಸಿ ಒತ್ತಡ ಹಾಕಿ ವಂಚಿಸುತ್ತಿದ್ದರು ಎಂದು ತನಿಖೆಯ ಸಂದರ್ಭದಲ್ಲಿ ಗೊತ್ತಾಗಿದೆ. ಬಂಧಿತರು ಹಣಕಾಸಿನ ವಂಚನೆ, ಅಕ್ರಮ ಬೆಟ್ಟಿಂಗ್ ಹಾಗೂ ಜೂಜು ಸೇರಿದಂತೆ ವಿವಿಧ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.