ಬೆಳಗಾವಿ: ಲೋಕಸಭಾ ಚುನಾವಣೆಯಲ್ಲಿ ಮಗನ ಸೋಲಿನ ನಂತರ ಮೊದಲ ಬಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಧ್ಯಮಗಳ ಎದುರು ಬಂದು, ರಮೇಶ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ.
“ಲೋಕಸಭಾ ಚುನಾವಣೆಯಲ್ಲಿ ಮಗನ ಸೋಲಿನಿಂದ ಹತಾಶರಾಗಿದ್ದು ಸತ್ಯ. ಆದರೆ ಸೋಲಿನಿಂದ ಧೃತಿಗೆಟ್ಟಿಲ್ಲ, ಶಸ್ತ್ರಾಸ್ತ್ರ ಕೈಚೆಲ್ಲಿಲ್ಲ, ರಾಜಕಾರಣದಲ್ಲಿ ಸೋಲು-ಗೆಲುವು ಇದ್ದಿದ್ದೇ. ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ನಮ್ಮದು. ಸೋತಲ್ಲೇ ಗೆಲ್ಲುವ ಛಲ ನನ್ನ ಮಗನಲ್ಲಿ ಹುಟ್ಟಿದೆ” ಎಂದು ಹೇಳಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಡಿಕೆ ಶಿವಕುಮಾರ್ ಸೊಕ್ಕಿನಿಂದ ಮೃಣಾಲ್ ಸೋತರು ಎಂದು ರಮೇಶ್ ಜಾರಕಿಹೊಳಿ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವೆ, “ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನ ಸಹೋದರ ಚನ್ನರಾಜ್ ಹಟ್ಟಿಹೊಳಿ ದಾಖಲೆ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಜಾರಕಿಹೊಳಿ ಭಗೀರಥ ಪ್ರಯತ್ನ ಮಾಡಿದ್ದರು. ಆದರೂ ಅವರ ಕೈಯಿಂದ ಏನೂ ಆಗಲಿಲ್ಲ. ಮುಂದೆಯೂ ಆಗಲ್ಲ. ಸೊಕ್ಕು ಯಾರಿಗಿದೆ ಎಂಬುವುದನ್ನು ಜನರೇ ನಿರ್ಧರಿಸುತ್ತಾರೆ” ಎಂದು ಹೇಳಿದ್ದಾರೆ.
