ವಿಜಯಪುರ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣದ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸುವಂತೆ ಮನವಿ ಮಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪತ್ರಕ್ಕೆ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಸದ್ಯ ಈ ಪತ್ರಕ್ಕೆ ಅಮಿತ್ ಶಾ ಸ್ಪಂದಿಸಿದ್ದಾರೆ.
ನಿಮ್ಮ ಪತ್ರ ಸ್ವೀಕಾರ ಮಾಡಿದ್ದೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಸನಗೌಡ ಪಾಟೀಲ್ ಯತ್ನಾಳ್ ಗೆ ಮರಳಿ ಪತ್ರ ಬರೆದಿದ್ದಾರೆ. ಶಾಸಕ ಯತ್ನಾಳ್ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ, 2016ರಲ್ಲಿ ಮಡಿಕೇರಿಯಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ, 2019ರಲ್ಲಿ ಡಾ. ಜಿ.ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆ ಪ್ರಕರಣ, ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ಉಲ್ಲೇಖಿಸಿ ಇವುಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದರು.

ಕಾಂಗ್ರೆಸ್ ಅಧಿಕಾರದಲ್ಲಿ ಭ್ರಷ್ಟಾಚಾರ ನಡೆಸಲು ಸಹಕಾರ ಕೊಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತದೆ. ಇದರಿಂದ ಅನೇಕ ದಕ್ಷ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ 88.62 ಕೋಟಿ ನಗದು ವರ್ಗಾವಣೆ ವಹಿವಾಟನ್ನು ಅಕ್ರಮ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿದೆ. ಈ ಕುರಿತು ಬ್ಯಾಂಕ್ ಸಿಬಿಐಗೆ ದೂರು ನೀಡಿದೆ. ಜೊತೆಗೆ ಬ್ಯಾಂಕ್ ತನ್ನ ಮೂರು ಅಧಿಕಾರಿಗಳನ್ನು ಅಮಾನತು ಮಾಡಿದೆ. ಬ್ಯಾಂಕ್ ನೀಡಿದ ದೂರಿನ ಆಧಾರದ ಮೇಲೆ ಸಿಬಿಐ ಮಧ್ಯ ಪ್ರವೇಶಿಸಿ ತನಿಖೆ ನಡೆಸಬೇಕು ಎಂದು ಪತ್ರದ ಮೂಲಕ ಯತ್ನಾಳ್ ಮನವಿ ಮಾಡಿದ್ದಾರೆ. ಸದ್ಯ ಪತ್ರಕ್ಕೆ ಸ್ಪಂದನೆ ಸಿಕ್ಕಿದ್ದು, ತನಿಖೆಗೆ ಕೇಂದ್ರ ಮುಂದಾಗುತ್ತಾ ಎಂಬುವುದನ್ನು ಕಾಯ್ದು ನೋಡಬೇಕಿದೆ.
