ಕಲಬುರಗಿ: ದೇವಸ್ಥಾನಕ್ಕೆ ಹೋದ ವ್ಯಕ್ತಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಅಫಜಲಪುರ ತಾಲ್ಲುಕಿನ ಗಾಣಗಾಪುರ(Ganagapura)ದಲ್ಲಿ ನಡೆದಿದೆ. ಮಹೇಶ್ ಕೋಲತೆ ಕೊಲೆಯಾದ ವ್ಯಕ್ತಿ. ಈ ವ್ಯಕ್ತಿ ಮಹಾರಾಷ್ಟ್ರದ ಪುಣೆ ಜಿಲ್ಲೆಯ ನಿವಾಸಿ ಎನ್ನಲಾಗಿದೆ. ವೃತ್ತಿಯಲ್ಲಿ ವ್ಯವಸಾಯ ಮಾಡಿಕೊಂಡಿದ್ದ. ಕಳೆದ ಎರಡು ತಿಂಗಳ ಹಿಂದೆ ಮನೆ ಬಿಟ್ಟು ಬಂದಿದ್ದ ಈ ವ್ಯಕ್ತಿ, ಮಹಾರಾಷ್ಟ್ರದ ಹಲವೆಡೆ ಓಡಾಡಿದ್ದಾನೆ. ನಂತರ ಕಲಬುರಗಿ ಜಿಲ್ಲೆಯ ಅಫಜಲಪುರಕ್ಕೆ ಬಂದು, ಇಲ್ಲಿನ ಪ್ರಸಿದ್ದ ಗಾಣಗಾಪುರದ ದತ್ತನ ದರ್ಶನ ಪಡೆದು, ಅಲ್ಲಿಯೇ ಇರುವುದಾಗಿ ಕುಟುಂಬಸ್ಥರಿಗೆ ಹೇಳಿದ್ದಾನೆ. ಕೊಲೆಯಾಗಿರುವ ವ್ಯಕ್ತಿ ಆಗಾಗ ಹೀಗೆ ಮನೆ ಬಿಟ್ಟು ಹೋಗುತ್ತಿದ್ದ ಎನ್ನಲಾಗಿದೆ.
ಆದರೆ, ಗಾಣಗಾಪುರದ ಸಂಗಮದಲ್ಲಿದ್ದ ಮಹೇಶ್ ನನ್ನು ದುಷ್ಕರ್ಮಿಗಳು ಸಂಗಮ ಪಕ್ಕದಲ್ಲೇ ಇರುವ ಜಮೀನಿನಲ್ಲೇ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಬೆಳಿಗ್ಗೆ ಕಾರ್ಮಿಕರು ಜಮೀನಿಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಮಹೇಶ್ ಗೆ ಇಲ್ಲಿ ಯಾರೂ ಶತೃಗಳಿಲ್ಲ. ಆದರೂ ಈ ಘಟನೆ ಹೇಗೆ ನಡೆಯಿತು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತು ದೇವಲ್ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.