ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯ ಚರ್ಚೆ ಜೋರಾಗಿದ್ದು, ಈ ಮಧ್ಯೆ ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ.
ಲೋಕಸಭಾ ಚುನಾವಣೆ ಮುಕ್ತಾಯದ ಬೆನ್ನಲ್ಲೇ ಕೇಂದ್ರ ಸಚಿವರಾಗಿ ಹೆಚ್ಡಿ ಕುಮಾರಸ್ವಾಮಿ ಆಯ್ಕೆ ಆಗಿದ್ದಾರೆ. ಹೀಗಾಗಿ ಅವರು ಚನ್ನಪಟ್ಟಣದ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತೆರವಾದ ಸ್ಥಾನಕ್ಕೆ ಇನ್ನೂ ಉಪ ಚುನಾವಣೆ ಘೋಷಣೆಯಾಗಿಲ್ಲ. ಆದರೂ ಅಭ್ಯರ್ಥಿಗಳ ಕುರಿತು ಚರ್ಚೆ ಆರಂಭವಾಗಿತ್ತು. ಕಾಂಗ್ರೆಸ್ ನಿಂದ ಡಿ.ಕೆ. ಶಿವಕುಮಾರ್ ಇಲ್ಲವಾದರೆ ಅವರ ಮಗಳು ಸ್ಪರ್ಧೆ ಮಾಡಬಹುದು ಎಂಬ ಮಾತು ಕೇಳಿ ಬರುತ್ತಿದ್ದವು. ಆದರೆ, ಇದಕ್ಕೆಲ್ಲ ಡಿಸಿಎಂ ಡಿ.ಕೆ. ಶಿವಕುಮಾರ್ ತೆರೆ ಎಳೆದಿದ್ದಾರೆ.
ಈ ಹಿಂದೆ ಡಿ.ಕೆ. ಶಿವಕುಮಾರ್ ಪರೋಕ್ಷವಾಗಿ ತಾವೇ ಸ್ಪರ್ಧಿಸುವುದಾಗಿ ಸುಳಿವು ಕೊಟ್ಟಿದ್ದರು. ಆದರೆ ಅವರ ಕುಟುಂಬದಿಂದ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಇದೆಲ್ಲದಕ್ಕೂ ಡಿಕೆ ಶಿವಕುಮಾರ ಈಗ ತೆರೆ ಎಳೆದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡಿಸಿಎಂ, ನಮ್ಮ ಕುಟುಂಬದ ಯಾವುದೇ ಸದಸ್ಯರು ಚುನಾವಣಾ ರಾಜಕೀಯಕ್ಕೆ ಬರುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ನಾನು ಬಹಳ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ಆದರೂ ಈ ಬಗ್ಗೆ ಆಗಾಗ ಸೃಷ್ಟಿಯಾಗುವ ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ವಿನಂತಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಮತ್ತೆ ಯಾವ ದಾಳ ಉರುಳಿಸುತ್ತಾರೆ ಎಂಬುವುದನ್ನು ಕಾಯ್ದು ನೋಡಬೇಕಿದೆ.