ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ನಲ್ಲಿ ಡಿಸಿಎಂದ್ದೇ ಸುದ್ದಿ ಎನ್ನುವಂತಾಗಿತ್ತು. ಜಾತಿಗೊಂದು ಡಿಸಿಎಂ ಹುದ್ದೆ ಬೇಕೆಂದು ಹಲವರು ಪಟ್ಟು ಹಿಡಿದಿದ್ದರು. ಆದರೆ, ಇದಕ್ಕೆ ಹೈಕಮಾಂಡ್ ಸೊಪ್ಪು ಹಾಕಿಲ್ಲ ಎನ್ನಲಾಗಿದೆ. ಹೀಗಾಗಿಯೇ ಸಿದ್ದು ಬಣ ಮತ್ತೊಂದು ಅಸ್ತ್ರ ಹೂಡಲು ಮುಂದಾಗಿರುವುದು ಚರ್ಚೆಯಾಗುತ್ತಿದೆ.
ಡಿಸಿಎಂ ಕೂಗಿಗೆ ಬೆಲೆ ಸಿಗದಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಚರ್ಚೆ ಈಗ ತೀವ್ರ ಸ್ವರೂಪ ಪಡೆದಿದೆ. ಡಿಸಿಎಂ ಹುದ್ದೆ ಸೃಷ್ಟಿಗೆ ಡಿಕೆ ಬಣ ಆಕ್ಷೇಪ ಎತ್ತಿರುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯ ಚರ್ಚೆಗಳನ್ನು ಸಿಎಂ ಸಿದ್ದರಾಮಯ್ಯ ಬಣ ಮುನ್ನಲೆಗೆ ತಂದಿದೆ. ಇದರ ಮುಂದಾಳತ್ವ ವಹಿಸಿರುವ ಸಚಿವ ಕೆ ಎನ್ ರಾಜಣ್ಣ ಸದ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಜೋತು ಬಿದ್ದಿದ್ದಾರೆ.

ಈ ಮೂಲಕ ಡಿಸಿಎಂ ವಿರುದ್ಧ ಒಂದು ಬಣ ತೊಡೆ ತಟ್ಟಿಯೇ ನಿಂತಿದೆ ಎಂಬುವುದು ಇದರಿಂದ ಜಗಜ್ಜಾಹೀರಾಗುತ್ತಿದೆ. ಡಿಸಿಎಂ ಹೆಚ್ಚುವರಿ ಹುದ್ದೆ ಸೃಷ್ಟಿಗೆ ಹೈಕಮಾಂಡ್ ಸಮ್ಮತಿ ಸಿಗದ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯ ಪಟ್ಟನ್ನು ಹಿಡಿದಿರುವ ಸಿದ್ದರಾಮಯ್ಯ ಬಣ, ಹಿಂದೆ ಹೈಕಮಾಂಡ್ ನಾಯಕರು ನೀಡಿರುವ ಭರವಸೆಯನ್ನೇ ಅಸ್ತ್ರವನ್ನಾಗಿ ಪ್ರಯೋಗ ಮಾಡುತ್ತಿದೆ. ಸಿಎಂ ಸ್ಥಾನದ ಆಯ್ಕೆಯ ಸಂದರ್ಭದಲ್ಲಿ ಹೈಕಮಾಂಡ್ ನೀಡಿದ ಭರವಸೆ ಏನು ಎಂಬ ವಿಚಾರವನ್ನು ಕೆಎನ್ ರಾಜಣ್ಣ ಪ್ರಸ್ತಾಪಿಸಿ ಆ ಸುದ್ದಿಗೆ ಕಿಚ್ಚು ಹಚ್ಚಿದ್ದಾರೆ.
ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ಒಬ್ಬರನ್ನೇ ಡಿಸಿಎಂ ಆಗಿ ಆಯ್ಕೆ ಮಾಡುತ್ತೇವೆ. ಡಿಕೆ ಶಿವಕುಮಾರ್ ಲೋಕಸಭೆ ಚುನಾವಣೆ ಆಗುವ ತನಕ ಕೆಪಿಸಿಸಿ ಅಧ್ಯಕ್ಷರಾಗಿ ಇರುತ್ತಾರೆ ಎಂದು ಹೈಕಮಾಂಡ್ ಹೇಳಿತ್ತು ಎಂದು ಕೆ.ಎನ್. ರಾಜಣ್ಣ ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಕುರ್ಚಿಗೆ ಯಾರು ಬೇಕಾದರೂ ಟವೆಲ್ ಹಾಕಬಹುದು ಎಂಬುವುದನ್ನು ಘೋಷಿಸಿ ಬಿಟ್ಟಂತಾಗಿದೆ.

ಆ ಸಂದರ್ಭದಲ್ಲಿ ಹೇಳಿದ ಹೇಳಿಕೆಯನ್ನೇ ಈಗ ಮತ್ತೆ ಮತ್ತೆ ನೆನಪು ಮಾಡಿಕೊಡುವ ಮೂಲಕ ಡಿಕೆಶಿ ಮೂಲೆಗುಂಪು ಮಾಡುವ ತಂತ್ರವೂ ನಡೆದಿದೆ. ಅಷ್ಟೇ ಅಲ್ಲ, ಎಲ್ಲ ಸಮುದಾಯದವರೂ ಅಧ್ಯಕ್ಷರಾಗಲು ಅರ್ಹರು. ಲಿಂಗಾಯತ ನಾಯಕರು ಅಧ್ಯಕ್ಷ ಸ್ಥಾನ ಕೇಳುತ್ತಿರುವುದರಲ್ಲಿ ತಪ್ಪೇನಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯ ಚರ್ಚೆಗೆ ಬಲ ತುಂಬಿದ್ದಾರೆ ರಾಜಣ್ಣ.