ಬೆಂಗಳೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪೆನ್ ಡ್ರೈವ್ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿತ್ತು. ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ದೃಶ್ಯಾವಳಿಗಳು ತುಂಬಿದ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಈಗ ಮಾಜಿ ಶಾಸಕ ಪ್ರೀತಂಗೌಡಗೆ ಸಂಕಷ್ಟ ಶುರುವಾಗಿದೆ.
ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ)ಕೈ ಹಾಸನ ಜಿಲ್ಲೆಯ ಮಹಿಳೆಯೊಬ್ಬರು ದೂರು ನೀಡಿದ್ದು, ಆದರನ್ವಯ ಪ್ರಜ್ವಲ್ ಹಾಗೂ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎನ್ನಲಾಗಿದೆ. ಅಲ್ಲದೇ, ಬಿಜೆಪಿ ಮುಖಂಡ ಶರತ್ ಅಲಿಯಾಸ್ ಕ್ವಾಲಿಟಿ ಬಾರ್ ಶರತ್ ಮತ್ತು ಕಿರಣ್ ವಿರುದ್ಧ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ)ದ ಠಾಣೆಯಲ್ಲಿ ಹೊಸದೊಂದು ಎಫ್ ಐಆರ್ ದಾಖಲಾಗಿದೆ. ಮಹಿಳೆಯ ಅಶ್ಲೀಲ ವಿಡಿಯೋವನ್ನು ಪ್ರಜ್ವಲ್ ಚಿತ್ರೀಕರಿಸಿದ ಆರೋಪವಿದ್ದರೆ, ಅವುಗಳಿದ್ದ ಪೆನ್ ಡ್ರೈವ್ ನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಿದ ಆಪಾದನೆ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧ ಕೇಳಿ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹದಲ್ಲಿದ್ದ ಪ್ರಜ್ವಲ್ ನನ್ನು ಬಾಡಿ ವಾರಂಟ್ ಮೇರೆಗೆ ಎಸ್‌ಐಟಿ ಮಂಗಳವಾರ 4 ದಿನ ವಶಕ್ಕೆ ಪಡೆದಿದೆ. ಹೀಗಾಗಿ ಪ್ರೀತಂಗೌಡ ಹಾಗೂ ಅವರ ಸಹಚರರಿಗೆ ಬಂಧನ ಭೀತಿ ಎದುರಾಗಿದ್ದು, ಮೂವರ ಪತ್ತೆಗೆ ಎಸ್‌ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಇತ್ತೀಚೆಗಷ್ಟೇ ಶರತ್ ಹಾಗೂ ಕಿರಣ್ ಮನೆಗಳ ಮೇಲೆ ಕೆಲ ದಿನಗಳ ಹಿಂದೆಯೇ ಎಸ್ ಐಟಿ ದಾಳಿ ನಡೆಸಿ ಕೆಲ ದಾಖಲೆಗಳನ್ನು ಜಪ್ತಿ ಮಾಡಿತ್ತು. ಅಲ್ಲದೆ ಪ್ರೀತಂಗೌಡರ ಮತ್ತಿಬ್ಬರು ಸಹಚರರು ಪೆನ್‌ಡೈವ್ ಹಂಚಿಕೆಯಲ್ಲಿ ಬಳಸಿದ್ದರು ಎನ್ನಲಾದ ಕಂಪ್ಯೂಟರ್, ಹಾಡ್ ೯ಡಿಸ್ಕ್ ಅನ್ನು ನದಿಗೆ ಎಸೆಯುವ ಸಂದರ್ಭದಲ್ಲಿ ಎಸ್ ಐಟಿ ಕೈಗೆ ಸಿಕ್ಕಿದ್ದರು. ವಿಚಾರಣೆ ವೇಳೆ ಅವರು ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ಪ್ರೀತಂಗೌಡ ಅವರಿಗೆ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ.