ಐಸಿಸಿ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನ್ (Afghanistan) ತಂಡ ಸೆಮಿಫೈನಲ್ ತಲುಪಿದೆ.
ಬಾಂಗ್ಲಾ ವಿರುದ್ಧ ನಡೆದ ನಿರ್ಣಾಯಕ ಪಂದ್ಯದಲ್ಲಿ ರೋಚಕ ಜಯ ಸಾಧಿಸಿ ಅಫ್ಘಾನ್ ಪಡೆ ನಾಕೌಟ್ ಹಂತಕ್ಕೇರಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ತಂಡದ ನಾಯಕ ರಶೀದ್ ಖಾನ್ ಬ್ಯಾಟಿಂಗ್ ಆಯ್ಕೆ ಮಾಡಿದ್ದರು. ಅದರಂತೆ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ್ ತಂಡಕ್ಕೆ ಆರಂಭಿಕ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ ಗೆ 59 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ಇಬ್ರಾಹಿಂ ಝದ್ರಾನ್ 18 ರನ್ ಗಳಿಸಿ ಔಟ್ ಆದರು. ಅಝ್ಮತುಲ್ಲಾ (10)ರನ್ ಗೆ ಔಟ್ ಆದರು. ರಹಮಾನುಲ್ಲಾ ಗುರ್ಬಾಝ್ 43 ರನ್ ಬಾರಿಸಿ ಔಟಾದರು. ಅಂತಿಮ ಹಂತದಲ್ಲಿ ರಶೀದ್ ಖಾನ್ 10 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ನೊಂದಿಗೆ 19 ರನ್ ಗಳಿಸಿದರು. ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 115 ರನ್ ಗಳಿಸಿತು.
ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಅಫ್ಘಾನ್ ಬೌಲರ್ ಗಳು ಯಶಸ್ವಿಯಾದರು. ಕೇವಲ 23 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ, ಮಳೆ ಆರಂಭವಾಯಿತು. ಹೀಗಾಗಿ ಒಂದು ಓವರ್ ಕಡಿತ ಮಾಡಿ ಬಾಂಗ್ಲಾಕ್ಕೆ 114 ರನ್ ಗಳ ಗುರಿ ನೀಡಲಾಯಿತು. ಗುರಿ ಬೆನ್ನಟ್ಟಿದ ಬಾಂಗ್ಲಾ ಪರ ಲಿಟ್ಟನ್ ದಾಸ್ ಒಂದೆಡೆ ಗಟ್ಟಿಯಾಗಿ ನೆಲೆ ನಿಂತರೆ ಮತ್ತೊಂದು ತುದಿಯಲ್ಲಿ ಉಳಿದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು.
pಪರಿಣಾಮ ಲಿಟ್ಟನ್ ದಾಸ್ (54) ಅರ್ಧಶತಕ ಬಾರಿಸಿ ಅಜೇಯರಾಗಿ ಉಳಿದರು. ಆದರೆ ಬಾಂಗ್ಲಾದೇಶ್ ತಂಡವು 17.5 ಓವರ್ ಗಳಲ್ಲಿ 105 ರನ್ ಗಳಿಸಿ ಆಲೌಟ್ ಆಯಿತು. ಅಫ್ಘಾನಿಸ್ತಾನ್ ತಂಡ ಡಕ್ವರ್ತ್ ಲೂಯಿಸ್ ನಿಯಮದಂತೆ 8 ರನ್ ಗಳ ರೋಚಕ ಜಯ ಸಾಧಿಸಿತು. ಈ ಮೂಲಕ ಮೊದಲ ಬಾರಿಗೆ ಸೆಮಿಸ್ ಗೆ ಎಂಟ್ರಿಕೊಟ್ಟಿರುವ ಅಪ್ಘಾನ್ ತಂಡಕ್ಕೆ ಆ ದೇಶದ ಅಭಿಮಾನಿಗಳು ಹಾರೈಸಿದ್ದಾರೆ. ಸೆಮಿಸ್ ಪ್ರವೇಶಿಸುತ್ತಿದ್ದಂತೆ ಜನರು ರಸ್ತೆಗೆ ಇಳಿದು ಕುಣಿದು ಕುಪ್ಪಳಿಸಿದ್ದಾರೆ.