ಬೆಂಗಳೂರು: ರಾಜ್ಯದಲ್ಲಿ ಡಿಸಿಎಂ ಹುದ್ದೆಯ ಹಗ್ಗ-ಜಗ್ಗಾಟ ಮತ್ತೆ ಮುನ್ನೆಲೆಗೆ ಬಂದಿದೆ.
ದಲಿತ, ಲಿಂಗಾಯತ ಮತ್ತು ಅಲ್ಪಸಂಖ್ಯಾತರಿಗೆ ಡಿಸಿಎಂ ಹುದ್ದೆ ನೀಡುವ ವಿಷಯ ತೀವ್ರ ಚರ್ಚೆಗೆ ಕಾರಣವಾಗುತ್ತಿದೆ. ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಜಾತಿ ಆಧಾರದಲ್ಲಿ ಹೊಸದಾಗಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಸಂಬಂಧಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಕೆ.ಎನ್.ರಾಜಣ್ಣ ಅವರು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೆಂದು ಹೇಳುತ್ತಿದ್ದಾರೆ.
ಸಹಕಾರ ಸಚಿವ ಡಾ.ಎಚ್.ಸಿ.ಮಹದೇವಪ್ಪ(Dr HC Mahadevappa) ಅವರು ದಲಿತರಿಗೆ ಸಾಮರ್ಥ್ಯದ ಮೇಲೆ ಡಿಸಿಎಂ ಹುದ್ದೆ ಕೊಡಬೇಕೇ ಹೊರತು ಕೋಟಾದಡಿ ಅಲ್ಲ ಎಂದು ಹೇಳಿದ್ದಾರೆ. ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ, ಹೆಚ್ಚುವರಿ ಡಿಸಿಎಂ ಹುದ್ದೆ ಬೇಡಿಕೆ ಕೇಳೋದು ತಪ್ಪಲ್ಲ. ಆದರೆ ಕೊಡೋದು, ಬಿಡೋದು ಹೈಕಮಾಂಡ್‌ಗೆ ಬಿಟ್ಟದ್ದು ಎಂದಿದ್ದಾರೆ.
ಈ ಕುರಿತು ಪಕ್ಷ ನಿರ್ಧಾರ ಕೈಗೊಳ್ಳುತ್ತದೆ. ಮೂವರಲ್ಲ, ಐವರನ್ನು ಡಿಸಿಎಂ ಮಾಡಲಿ. ನನ್ನ ಅಭ್ಯಂತರವಿಲ್ಲ ಎಂದು ಡಿಕೆ ಸುರೇಶ್ ಬೇಸರದ ಮಾತುಗಳನ್ನು ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ಹಿರಿಯ ನಾಯಕರು ಸಾಕಷ್ಟು ಜನರಿದ್ದಾರೆ. ಸಮುದಾಯಕ್ಕೊಂದು ಡಿಸಿಎಂ ಹುದ್ದೆ ನೀಡಿದರೆ, ಸಾಕಷ್ಟು ಸೃಷ್ಟಿ ಮಾಡಬಹುದು. 8 ಬಾರಿ ಶಾಸಕರಾಗಿರುವ ರಾಮಲಿಂಗಾರೆಡ್ಡಿ, ಆರ್.ವಿ.ದೇಶಪಾಂಡೆ, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಎಂ.ಬಿ.ಪಾಟೀಲ್, ಅಲ್ಪಸಂಖ್ಯಾತ ಸಮುದಾಯದ ಜಮೀರ್ ಅಹಮದ್, ಕೃಷ್ಣ ಬೈರೇಗೌಡ, ಚೆಲುವರಾಯಸ್ವಾಮಿ, ದಿನೇಶ್ ಗುಂಡೂರಾವ್ ಇವರನ್ನೆಲೆಲ ಮಂತ್ರಿ ಮಾಡಲಿ. ನಮ್ಮ ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ.