
ಶ್ರೀನಗರ: ಮೂರನೇ ಬಾರಿ ಪ್ರಧಾನಿಯಾದ ನಂತರ (Lok Sabha Elections 2024) ನರೇಂದ್ರ ಮೋದಿ (PM Narendra Modi) ಜೂನ್ 20ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ.
ಅಲ್ಲದೇ, 2 ದಿನಗಳ ಕಾಲ ಜಮ್ಮು ಕಾಶ್ಮೀರದಲ್ಲಿ (Jammu and Kashmir) ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಶ್ರೀನಗರದಲ್ಲಿ ಯುವಕರ ಸಬಲೀಕರಣ, ಜಮ್ಮು ಕಾಶ್ಮೀರದ ಪರಿವರ್ತನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಕೇಂದ್ರ ಸರ್ಕಾರ ಹಿಂಜರಿಯುವುದಿಲ್ಲ. ಯುವಕರು ಹೊಸ ಶಕ್ತಿಗಾಗಿ ಮೆಚ್ಚುಗೆಗೆ ಅರ್ಹರು. ಆದರೆ ಶಾಂತಿ ಮತ್ತು ಮಾನವೀಯತೆಯ ಶತ್ರುಗಳು ಜಮ್ಮು ಮತ್ತು ಕಾಶ್ಮೀರದ ಪ್ರಗತಿಯನ್ನು ಇಷ್ಟಪಡುವುದಿಲ್ಲ. ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯನ್ನು ನಿಲ್ಲಿಸಲು ಮತ್ತು ಇಲ್ಲಿ ಶಾಂತಿ ಸ್ಥಾಪನೆಯನ್ನು ತಡೆಯಲು ಅವರು ಏನೇನೋ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.

ನಿಷೇಧಿತ ಭಯೋತ್ಪಾದಕ ಗುಂಪು ಲಷ್ಕರ್-ಎ-ತೊಯ್ಬಾದ ಅಂಗವಾದ ಪಾಕಿಸ್ತಾನ ಬೆಂಬಲಿತ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ರಿಯಾಸಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಉಗ್ರರ ನಿರ್ಮೂಲನೆ ಕುರಿತು ಮೋದಿ ಭರವಸೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಂದು ಜಮ್ಮು ಕಾಶ್ಮೀರದಲ್ಲಿ 1,500 ಕೋಟಿ ರೂ.ಗೂ ಹೆಚ್ಚು ಮೌಲ್ಯದ 84 ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. 1800 ಕೋಟಿ ರೂ. ಮೌಲ್ಯದ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳನ್ನು ಉದ್ಘಾಟಿಸಲಾಯಿತು.
