ನವದೆಹಲಿ: ದೆಹಲಿ ಮದ್ಯ ನೀತಿಗೆ (Delhi Liquor Policy) ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಗೆ ಜಾಮೀನು ಮಂಜೂರಾಗಿದೆ.
ಅವರಿಗೆ ಇಂದು ಜಾಮೀನು ಮಂಜೂರಾಗಿದೆ. ನಿನ್ನೆ ಕೇಜ್ರಿವಾಲ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ರೋಸ್ ಅವೆನ್ಯೂ ಕೋರ್ಟ್ ನ್ಯಾಯಾಧೀಶರಾದ ನಿಯಯ್ ಬಿಂದು 2 ದಿನಗಳ ಕಾಲ ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ, ಇಂದು ಆದೇಶ ಪ್ರಕಟಿಸಿದೆ.
1 ಲಕ್ಷ ರೂಪಾಯಿಯ ಜಾಮೀನು ಬಾಂಡ್ ಪಾವತಿಸಿದ ನಂತರ ಶುಕ್ರವಾರ ತಿಹಾರ್ ಜೈಲಿನಿಂದ ಹೊರ ಬರಬಹುದಾಗಿದೆ. ಲೋಕಸಭೆ ಚುನಾವಣೆಗೆ ಮುನ್ನ ನಾಟಕೀಯ ಬೆಳವಣಿಗೆಯಲ್ಲಿ ಮಾರ್ಚ್ 21 ರಂದು ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು.
ಮೇ ತಿಂಗಳಲ್ಲಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಆ ಬಳಿಕ ಜೂನ್ 2 ರಂದು ಶರಣಾಗಿದ್ದರು.
