ನವದೆಹಲಿ: ದೇಶದಲ್ಲಿ ‘ನೀಟ್’ ವಿವಾದ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಹೀಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಾನು ನಡೆಸಿದ ‘ಯುಜಿಸಿ-ನೆಟ್’ ಪರೀಕ್ಷೆಯನ್ನೇ ರದ್ದು ಮಡಿದೆ.
ಈ ಪರೀಕ್ಷೆಯನ್ನು ನಡೆಸಿದ ಒಂದು ದಿನದ ನಂತರವೇ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ಜೂನ್ 18ರಂದು ಪರೀಕ್ಷೆ ನಡೆದಿತ್ತು. ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಮತ್ತು ಜೂನಿಯರ್ ಸಂಶೋಧನಾ ಫೆಲೋಶಿಪ್‌ಗೆ ಅರ್ಹತೆ ನಿರ್ಧರಿಸಲು ನಡೆದ ಈ ಪರೀಕ್ಷೆಗೆ 9 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಎದುರಿಸಿದ್ದರು ಎನ್ನಲಾಗಿದೆ.
2024ರ ಯುಜಿಸಿ ನೆಟ್ ಮರು ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಎಂಬಿಬಿಎಸ್ ಸೇರಿದಂತೆ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಈ ವರ್ಷ ನಡೆಸಲಾದ ‘ನೀಟ್-ಯುಜಿ’ (ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ) ಪರೀಕ್ಷೆಯಲ್ಲಿ ನಡೆದ ಅಕ್ರಮಗಳು ಹೊರ ಬರುತ್ತಿವೆ. ಎಳ್ಳಷ್ಟೂ ಅಕ್ರಮ ಸಹಿಸಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೇ, ಕೇಂದ್ರ ಸರಕಾರ ಹಾಗೂ ಎನ್ ಟಿಎಗೆ (ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿ) ನೋಟಿಸ್ ನೀಡಿದ ಬೆನ್ನಲ್ಲೇ ಈಗ ದಂಧೆಯಲ್ಲಿ ಎಂಜಿನಿಯರ್ ಹಾಗೂ ಸಚಿವರೊಬ್ಬರ ಕೈವಾಡವಿರುವ ಆರೋಪಗಳು ಕೇಳಿ ಬರುತ್ತಿದೆ.
ಬಿಹಾರದ ದಾನಾಪುರ ಪುರಸಭೆಯಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಿಕಂದರ್ ಪ್ರಸಾದ್ ಯಾದವ್ ಹೆಸರು ಥಳಕು ಹಾಕಿಕೊಂಡಿದೆ. ಪ್ರಸಕ್ತ ಸಾಲಿನ ‘ನೀಟ್-ಯುಜಿ’ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹಲವು ಅಕ್ರಮಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಜೂನ್ 21ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ.
