
ವಿವಿಧ ಬೇಡಿಕೆಗಳಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೋರಾಟಕ್ಕಿಳಿದಿದ್ದಾರೆ. ರಾಜ್ಯದ ಮೂಲೆ-ಮೂಲೆಯಿಂದ ಬೆಂಗಳೂರಿಗೆ ಬಂದಿರುವ ನೌಕರರು ತಮ್ಮ ಹಲವು ಬೇಡಿಕೆಗಳನ್ನು ಮುಂದಿಟ್ಟು, ಅನಿರ್ಧಿಷ್ಟ ಅವಧಿಯ ಹೋರಾಟಕ್ಕೆ ಕರೆಕೊಟ್ಟು ಪ್ರೀಡಂಪಾರ್ಕ್ ತುಂಬಿಕೊಂಡಿದ್ದಾರೆ. ಇಂದು (19|06|2024 ಬುಧವಾರ) ಬೆಳಿಗ್ಗೆಯಿಂದ ಹೋರಾಟ ಪ್ರಾರಂಭಿಸಿರುವ ನೌಕರರು ಬೇಡಿಕೆ ಈಡೇರಿಸದೆ ಇದ್ದಲ್ಲಿ, ಈ ಜಾಗದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಹಾಗಾದರೇ, ಇವರುಗಳ ಈ ಹೋರಾಟ ಮತ್ತು ಬೇಡಿಕೆಗಳ ಬಗ್ಗೆ ತಿಳಿಯೋಣ ಬನ್ನಿ.

ಅಸಲಿಗೆ ಇವರ ಬೇಡಿಕೆಳು ಹಲವಿದ್ದರೂ, ಹೋರಾಟಕ್ಕೆ ಮುಖ್ಯ ಕಾರಣವಾಗಿದ್ದು, ಸರ್ಕಾರವು ಈ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ ಮತ್ತು ಯುಕೆಜಿ (LKG & UKG) ಪ್ರಾರಂಭಿಸುತ್ತಿರುವುದಾಗಿದೆ. ಸದ್ಯ ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಆರ್ ಡಿಪಿಆರ್ (RDPR) ರೂಪಿಸುವ ಯಾವುದೇ ಕಾರ್ಯಕ್ರಮಗಳನ್ನು ಮತ್ತು ನಾಲ್ಕರಿಂದ ಆರು ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಇಲಾಖೆ ರೂಪಿಸುವ ಯೋಜನೆಗಳನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಹೋರಾಟಕ್ಕಿಳಿಯಲಾಗಿದೆ.
ಆರು ವರ್ಷದೊಳಗಿನ ಮಕ್ಕಳಿಗೆ ನಲವತ್ತು ಪರ್ಸೆಂಟ್ ದೈಹಿಕ ಬೆಳವಣಿಗೆಯ ಜೊತೆ ಎಂಬತೈದು ಪರ್ಸೆಂಟ್ ಮಾನಸಿಕ ಬೆಳವಣಿಗೆಯಷ್ಷೇ ಆಗಿರುವುದರಿಂದ, ಮೂರರಿಂದ ಆರು ವರ್ಷದ ಮಕ್ಕಳನ್ನು ಒಂದೆಡೆ ಕೂಡಿಸಿ ದೇಹದ ಅಂಗಾಂಗಳ ಬೆಳವಣಿಗೆಗೆ ಮತ್ತು ಮೆದುಳಿನ ಬೆಳವಣಿಗೆಗೆ ಬೇಕಾದ ಪೂರಕ ಪೌಷ್ಟಿಕ ಆಹಾರ, ಆರೋಗ್ಯ ಸಂಬಂಧಿತ ಸೌಲಭ್ಯಗಳು, ಅನೌಪಚಾರಿಕ ಶಿಕ್ಷಣ ನೀಡುವುದಕ್ಕಾಗಿಯೇ ಸರ್ಕಾರದ ವತಿಯಿಂದ “1976ರಲ್ಲಿ ಅಂಗನವಾಡಿ” ಅಂಗನವಾಡಿ ಕೇಂದ್ರಗಳ ಸ್ಥಾಪನೆಯಾಗಿರುವುದು. ಈಗ ನಾಲ್ಕು ವರ್ಷದ ಮೇಲ್ಪಟ್ಟ ಮಕ್ಕಳು ಸರ್ಕಾರಿ ಶಾಲೆಯ LKG & UKG ಸೇರಿಕೊಂಡರೇ, ಬಹು ಉಪಯೋಗದ ಉದ್ದೇಶದೊಂದಿಗೆ ಪ್ರಾರಂಭಗೊಂಡಿರುವ ಅಂಗನವಾಡಿ ಕೇಂದ್ರಗಳು ನಿಧಾನವಾಗಿ ಮುಚ್ಚಲ್ಪಡುತ್ತವೆ. ಎನೇ ಆದರೂ, ನಮ್ಮ ಅಂಗನವಾಡಿ ನೌಕರರುಗಳಲ್ಲಿ ಪಿಯುಸಿ ಓದಿರುವ 15217 ಮತ್ತು ಬಿಎ ಓದಿರುವ 6363 ನೌಕರರು, 1682 ಜನ ಎಂಎ (MA) ಪದವಿ ಮಾಡಿದವರಿದ್ದಾರೆ. ಇವರೆಲ್ಲರಿಗೂ ಅನುಭವದ ಆಧಾರದಲ್ಲಿ ತಾಯಿ ಮನಸ್ಸಿನ ವೃತ್ತಿ ನೈಪುಣ್ಯತೆ ಇದೆ. ಇದೀಗ ಬರುವ ಯುವಕ – ಯುವತಿಯರಿಗೆ ಈ ಶಕ್ತಿ ಇರಲು ಸಾಧ್ಯವೇ ಎಂಬ ಪ್ರಶ್ನೆ ಇಡಲಾಗಿದೆ. ನಮ್ಮ ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವಪ್ರಾಥಮಿಕ ಶಿಕ್ಷಣ ಮತ್ತು ಪೌಷ್ಟಿಕತೆ ಎರಡರ ಬಗ್ಗೆಯೂ ಕಾಳಜಿ ವಹಿಸಲಾಗುತ್ತದೆ. ಶಿಕ್ಷಣ ಇಲಾಖೆಗಳಲ್ಲಿ ಮಕ್ಕಳ ಅಪೌಷ್ಟಿಕತೆಯೆಡೆಗೆ ಗಮನವಿರುವುದಿಲ್ಲ ಎಂಬ ವಾದ ಮುಂದಿಟ್ಟು, ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭಿಸಲಾಗುತ್ತಿರುವ LKG & UKG ಯನ್ನು ನಿಲ್ಲಿಸಿಬೇಕು. ನಮ್ಮ 1008 ಅಂಗನವಾಡಿ ಕೇಂದ್ರಗಳನ್ನು ಗುರುತಿಸಿ ಅಲ್ಲಿಯೇ LKG & UKG ಸಂಬಂಧಿಸಿದಂತೆ ತರಗತಿ ಪ್ರಾರಂಭಿಸಲು ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗುತ್ತಿದೆ.

ಅಂಗನವಾಡಿ ಕೇಂದ್ರದ ಹೆಸರು ಪೂರ್ವ ಪ್ರಾಥಮಿಕ ಶಿಕ್ಷಣಕೇಂದ್ರ ಎಂದು ಪರಿವರ್ತಿಸುವುದು, ಸರ್ಕಾರದಿಂದ ಮಕ್ಕಳಿಗೆ ಸಮವಸ್ತ್ರ, ಬ್ಯಾಗ್ ಮತ್ತು ಷೂಗಳನ್ನು ನೀಡುವುದು, ಅಂಗನವಾಡಿ ಕಾರ್ಯಕರ್ತೆಯರನ್ನು ‘ಶಿಕ್ಷಕಿ’ಯರೆಂದು ಎಂದು ಪದನಾಮ ಬದಲಿಸುವುದು, ‘ECCE’ ನೀಡಿದ ಮಗುವಿಗೆ ‘TC’ ಕೊಡುವ ವ್ಯವಸ್ಥೆ ಮಾಡುವುದು, 2023ರ ವಿಧಾನಸಭೆಯ ಚುನಾವಣಾ ಆಶ್ವಾಸನೆಯಂತೆ (ಕಾಂಗ್ರೆಸ್) 15 ಸಾವಿರಕ್ಕೆ ವೇತನ ಹೆಚ್ಚಳ ಮಾಡುವುದು, ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಜುಟಿ ಪಾವತಿ ಮಾಡುವುದು, ಸರಬರಾಜಾಗುತ್ತಿರುವ ರೆಡಿಮೇಡ್ ಆಹಾರ ಪದ್ದತಿ ಬದಲಿಸಿ ಗುಣಮಟ್ಟದ ಆಹಾರ ಪದಾರ್ಥ ಸರಬರಾಜು ಮಾಡುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಸಹ ಸರ್ಕಾರದ ಮುಂದಿಟ್ಟು ಹೋರಾಟ ನಡೆಸಲಾಗುತ್ತಿದೆ.
ಸದ್ಯ ಹೋರಾಟದ ಬಿಸಿ ಸರ್ಕಾರಕ್ಕೆ ಮುಟ್ಟಿದ್ದು, ಅಂಗನವಾಡಿ ಕಾರ್ಯಕರ್ತೆಯರ ಈ ಹೋರಾಟಕ್ಕೆ ಸರ್ಕಾರ ಹೇಗೆ ಸ್ಪಂದಿಸಲಿದೆ ಕಾದುನೋಡಬೇಕಿದೆ.

