ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರು 17ನೇ ಕಂತಿನ ಕಿಸಾನ್ ನಿಧಿಯನ್ನು (PM-Kisan Samman Nidhi) ಬಿಡುಗಡೆ ಮಾಡಿದ್ದಾರೆ.
ದೇಶದಲ್ಲಿನ ಒಟ್ಟು 9.26 ಕೋಟಿ ರೈತರ ಖಾತೆಗಳಿಗೆ 20 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಪ್ರಧಾನಿ ಮೋದಿ(Narendra Modi) ಅವರು ಕಿಸಾನ್ ನಿಧಿಗೆ ಸಂಬಂಧಿಸಿದ ಕಡತಕ್ಕೆ ಮೊದಲ ಸಹಿ ಹಾಕಿದ್ದರು.
ಈ ಹಿನ್ನೆಲೆಯಲ್ಲಿ ತಮ್ಮ ಸ್ವಕ್ಷೇತ್ರದಲ್ಲಿ ನಡೆದಿದ್ದ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ಹಣ ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಸಖಿಯರಾಗಿ ತರಬೇತಿ ಹೊಂದಿದ ಸ್ವಯಂ ಸಹಾಯಕ ತಂಡಗಳ ಮಹಿಳೆಯರಿಗೆ ಮೋದಿ ಪ್ರಮಾಣಪತ್ರ ವಿತರಿಸಿದರು. ಬಳಿಕ ವಾರಣಾಸಿಯ ದಶಾಶ್ವಮೇಧ ಘಾಟ್ ನಲ್ಲಿ ನಡೆಯುವ ಗಂಗಾರತಿಯಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರು ಮತ್ತು ಬಡವರಿಗೆ ಸಂಬಂಧಿಸಿದ ಮೊದಲ ನಿರ್ಧಾರ ತೆಗೆದುಕೊಂಡಿದ್ದೇನೆ. ದೇಶದಲ್ಲಿ ಬಡವರಿಗಾಗಿ ಮೂರು ಕೋಟಿ ಮನೆ ನಿರ್ಮಾಣ ಮಾಡುವ ಗುರಿ ಇದೆ. ಕಿಸಾನ್ ಸಮ್ಮಾನ್ ನಿಧಿ ಮುಂದುವರಿಸಲು ನಿರ್ಧಾರ ಕೈಗೊಂಡಿದ್ದೇವೆ. ಕಿಸಾನ್ ಸಮ್ಮಾನ್ ನಿಧಿ ವಿಶ್ವದ ಅತಿದೊಡ್ಡ ಡಿಬಿಟಿ ಯೋಜನೆಯಾಗಿದೆ. ತಂತ್ರಜ್ಞಾನ ಬಳಸಿಕೊಂಡು ಫಲಾನುಭವಿಗೆ ನೇರ ಸರ್ಕಾರದ ಯೋಜನೆ ತಲುಪಿಸುತ್ತಿದೆ ಎಂದರು.
ಭಾರತದ ಹಲವಾರು ತರಕಾರಿ ವಿದೇಶಿ ಮಾರುಕಟ್ಟೆ ತಲುಪುತ್ತಿದೆ. ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಿಂದ ರಫ್ತು ಹೆಚ್ಚುತ್ತಿದೆ. ಕೃಷಿ ಸಖಿ ಯೋಜನೆ ಮೂಲಕ ಮಹಿಳೆಯರನ್ನು ಕೃಷಿಯಲ್ಲಿ ಗುರುತಿಸಲಾಗುವುದು. ಇದು ಲಕ್ ಪತಿ ದೀದಿಯನ್ನಾಗಿಸಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.