ಬೆಂಗಳೂರು: ಸರ್ಕಾರವು ಖಾಸಗಿ ಇಂಜನಿಯರಿಂಗ್ (engineering) ಪ್ರವೇಶಾತಿ ಶುಲ್ಕವನ್ನು ಶೇ. 10ರಷ್ಟು ಹೆಚ್ಚಿಸಿದೆ.
ಖಾಸಗಿ, ಅನುದಾನ ರಹಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಶುಲ್ಕ ಹೆಚ್ಚಿಸಲಾಗಿದೆ. ಹೆಚ್ಚುವರಿ ಶುಲ್ಕದಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ಹೆಚ್ಚಾಗಲಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ನೇತೃತ್ವದಲ್ಲಿ ಖಾಸಗಿ ಅನುದಾನಿತ, ಅನುದಾನರಹಿತ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಶೇ. 15ರಷ್ಟು ಹೆಚ್ಚಿಸಲು ಒತ್ತಾಯಿಸಿತು. ಆದರೆ, ಇದಕ್ಕೆ ಸಚಿವರು ಒಪ್ಪಿಗೆ ಸೂಚಿಸಿಲ್ಲ. ಹೀಗಾಗಿ ಶೇ. 10ರಷ್ಟು ಶುಲ್ಕ ಹೆಚ್ಚಿಸಲಾಗಿದೆ. ಕಳೆದ ವರ್ಷ ಖಾಸಗಿ ಇಂಜಿನಿಯರಿಂಗ್ ಕಾಲೇಜು ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿರುವ ಸರ್ಕಾರಿ ಕೋಟಾದ ಸೀಟುಗಳಿಗೂ ಪ್ರವೇಶಾತಿ ಶುಲ್ಕ ಶೇ.7ರಷ್ಟು ಹೆಚ್ಚಿಸಲಾಗಿತ್ತು. ಸರ್ಕಾರಿ ಕಾಲೇಜುಗಳಲ್ಲಿ 40 ಸಾವಿರ ರೂ ಶುಲ್ಕ ಹೆಚ್ಚಿಸಲಾಗಿತ್ತು.
ಸರ್ಕಾರಿ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ 67 – 68.000 ರೂ, ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ (ಟೈಪ್-1) ಶುಲ್ಕ 69,000 ರೂ, ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ (ಟೈಪ್-2) ಶುಲ್ಕ 76,000 ರೂ, ಡೀಮ್ಡ್ ಮತ್ತು ಖಾಸಗಿ ವಿವಿ ಕಾಲೇಜುಗಳ ಶುಲ್ಕ 1.69 ಲಕ್ಷ ರೂ. ನಿರ್ಧರಿಸಲಾಗಿತ್ತು. ಇದರ ಮಧ್ಯೆಯೂ ಹಲವು ಖಾಸಗಿ ಕಾಲೇಜುಗಳು ಮನಬಂದಂತೆ ಫೀಸ್ ಪಡೆದಿರುವ ಆರೋಪ ಕೂಡ ಇವೆ.