T20 World Cup 2024ನಲ್ಲಿ ಕೆನಡಾದ ಆಟಗಾರ ಪಾಕ್ ವಿರುದ್ಧ ಅರ್ಧ ಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ.
ಕೆನಡಾ ಬ್ಯಾಟರ್ ಆರೋನ್ ಜಾನ್ಸನ್ (Aaron Johnson) ಈ ವಿಶೇಷ ದಾಖಲೆ ಬರೆದಿದ್ದಾರೆ. ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಮೊದಲು ಬೌಲಿಂಗ್ ಆಯ್ದುಕೊಂಡಿದ್ದರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ್ದ ಕೆನಡಾ ತಂಡಕ್ಕೆ ಆರಂಭಿಕ ಆಟಗಾರ ಆರೋನ್ ಜಾನ್ಸನ್ ಉತ್ತಮ ಆರಂಭ ಒದಗಿಸಿದ್ದರು. ಇನ್ನೊಂದೆಡೆ ಮತ್ತೊಂದು ತುದಿಯಲ್ಲಿ ವಿಕೆಟ್ ಉದುರುತ್ತ ಸಾಗಿದವು. ಹೀಗಾಗಿ ಪವರ್ ಪ್ಲೇ ನಂತರ ಆರೋನ್ ಜಾನ್ಸನ್ ರಕ್ಷಣಾತ್ಮಕ ಆಟಕ್ಕೆ ಮುಂದಾಗಬೇಕಾಯಿತು.
ಈ ವೇಳೆ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. ಕೊನೆಗೂ 44 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 52 ರನ್ ಬಾರಿಸಿ ನಸೀಮ್ ಶಾ ಎಸೆತದಲ್ಲಿ ಬೌಲ್ಡ್ ಆದರು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೆನಡಾ ಪರ ಅತ್ಯಧಿಕ ಬಾರಿ 50+ ಸ್ಕೋರ್ ಬಾರಿಸಿದ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ನವನೀತ್ ಧಲಿವಾಲ್ (7 ಬಾರಿ) ಹೆಸರಿನಲ್ಲಿತ್ತು. 8ನೇ ಬಾರಿ 50+ ಸ್ಕೋರ್ಗಳಿಸುವ ಮೂಲಕ ಆರೋನ್ ಜಾನ್ಸನ್ ಕೆನಡಾ ಪರ ಹೊಸ ದಾಖಲೆ ಬರೆದಿದ್ದಾರೆ. ಆರೋನ್ ಜಾನ್ಸನ್ ಅರ್ಧ ಶತಕದ ನೆರವಿನಿಂದ ಕೆನಡಾ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 106 ರನ್ ಗಳಿಸಿತ್ತು.