ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಅವರ ಗೆಳತಿ ಪವಿತ್ರಾಗೌಡ ಅರೆಸ್ಟ್ ಆಗಿದ್ದಾರೆ. ಹಾಗಾದರೆ ಯಾರು ಕೊಲೆಯಾಗಿರುವ ವ್ಯಕ್ತಿ? ಏನಿದು ಪ್ರಕರಣ ಎಂಬ ಚರ್ಚೆ ಈಗ ಶುರುವಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ 10 ಜನ ಸಹಚರರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ರೇಣುಕಾಸ್ವಾಮಿ ಚಿತ್ರದುರ್ಗ ನಗರದ ಲಕ್ಷ್ಮೀವೆಂಕಟೇಶ್ವರ ಬಡಾವಣೆಯಲ್ಲಿ ವಾಸಿಸುತ್ತಿದ್ದರು. ಅವರು ಅಪೋಲೊ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದರು. ಈ ವ್ಯಕ್ತಿ ದರ್ಶನ್ ಅಭಿಮಾನಿಯಾಗಿದ್ದರು.
ರೇಣುಕಾಸ್ವಾಮಿಗೆ ಕಳೆದ ವರ್ಷ ಮದುವೆಯಾಗಿತ್ತು. ಅವರ ಪತ್ನಿ ಮೂರು ತಿಂಗಳ ಗರ್ಭಿಣಿ. ದರ್ಶನ್ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿ, ಅವರ ಕಟುಂಬದ ಬಗ್ಗೆ ಹೆಚ್ಚು ಚಿಂತಿಸುತ್ತಿದ್ದರು. ವಿಜಯಲಕ್ಷ್ಮಿ ಹಾಗೂ ದರ್ಶನ್ ದಾಂಪತ್ಯದ ಮಧ್ಯೆ ಬಂದಿದ್ದಾರೆಂದು ಪವಿತ್ರಾ ಬಗ್ಗೆ ಕೋಪ ಹೊಂದಿದ್ದರು. ಹೀಗಾಗಿ ಪವಿತ್ರಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ.
ಆದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿಯನ್ನು ಅಪಹರಿಸಿ, ಹತ್ಯೆ ಮಾಡಿ ಮೋರಿಯಲ್ಲಿ ಎಸೆಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಪವಿತ್ರಾಗೌಡ ಹಾಗೂ 10 ಜನ ಅರೆಸ್ಟ್ ಆಗಿದ್ದಾರೆ.
